ಬೆಂಗಳೂರು: ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನಡೆಯುತ್ತಿದೆ ಎನ್ನಲಾದ ಭ್ರಷ್ಟಾಚಾರದ ವಿರುದ್ಧ ಆರು ಸಾವಿರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರು ನಗರದ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಬೆಳಗ್ಗೆ ಬೃಹತ್ ರ‍್ಯಾಲಿ ನಡೆಸಿದರು.
ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಹಣ ದುರುಪಯೋಗದ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ ಮನೆವರೆಗೂ ಚಲೋ ಚಳವಳಿ ಹಮ್ಮಿಕೊಳ್ಳಲಾಗಿತ್ತು. ಆದರೆ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನಾಕಾರರನ್ನು ಪೊಲೀಸರು ತಡೆದ ಹಿನ್ನೆಲೆ ಪಾರ್ಕ್ನಲ್ಲೇ ಪ್ರತಿಭಟನೆ ಸಭೆ ನಡೆಸಿ, ಮುಖ್ಯಮಂತ್ರಿಗಳು ಸ್ಥಳಕ್ಕೆ ಬರಬೇಕೆಂದು ಒತ್ತಾಯಿಸಿದರು.
ಬೃಹತ್ ರ‍್ಯಾಲಿ ನಡೆಸಿದ ಕಟ್ಟಡ ಕಾರ್ಮಿಕರು ಕಟ್ಟಡ ಕಾರ್ಮಿಕರ ಪ್ರಮುಖ ಬೇಡಿಕೆಗಳು:
21 ಲಕ್ಷದ ರೇಷನ್ ಕಿಟ್, ಟೂಲ್ ಕಿಟ್, ಇಮ್ಯೂನಿಟಿ ಕಿಟ್, ದುಬಾರಿ ಕಾರು, ಟಿವಿ, ಆ್ಯಂಬುಲೆನ್ಸ್ ಖರೀದಿಯಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದ್ದು, ಈ ಕುರಿತು ಸದನ ಸಮಿತಿಯಿಂದ ತನಿಖೆ ನಡೆಸಬೇಕು. ಜೊತೆಗೆ ಕಾರ್ಮಿಕರ ಸ್ವಾಭಾವಿಕ ಸಾವಿಗೆ 5 ಲಕ್ಷ, ಅಪಘಾತದಿಂದ ಸಾವನ್ನಪ್ಪಿದರೆ 10 ಲಕ್ಷ, ಪ್ರತಿ ತಿಂಗಳು 5 ಸಾವಿರ ರೂ. ನಿವೃತ್ತಿ ವೇತನ ನೀಡಬೇಕು. ಮದುವೆಗೆ ಸಹಾಯ ಧನ 50 ಸಾವಿರದಿಂದ 1 ಲಕ್ಷ ರೂ.ಗೆ ಹೆಚ್ಚಿಸಬೇಕು. ಬಾಕಿ ಇರುವ ಕೋವಿಡ್ ಪರಿಹಾರವನ್ನು ತಕ್ಷಣ ನೀಡಬೇಕು. ಕಟ್ಟಡ ಕಾರ್ಮಿಕರ ಆಸ್ಪತ್ರೆ ವೆಚ್ಚವನ್ನು ಸರ್ಕಾರ ಭರಿಸಬೇಕು, ಲಸಿಕೆ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಗೆ ಹಣ ನೀಡಬಾರದು, ಕಾರ್ಮಿಕ ಸಂಘಟನೆಗಳ ವಿವಿಧ ಅರ್ಜಿಯನ್ನ ತಕ್ಷಣ ಇತ್ಯರ್ಥಗೊಳಿಸಬೇಕು ಎಂದು ಪ್ರತಿಭಟನಾಕಾರರು ಸರ್ಕಾರಕ್ಕೆ ಆಗ್ರಹಿಸಿದರು.