ಬೆಂಗಳೂರು:ಡಿ.ಜೆ. ಹಳ್ಳಿ ಹಾಗೂ ಕೆ.ಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧಿಸಿದಂತೆ ಸದ್ಯ ಸಿಸಿಬಿ ಪೊಲೀಸರು ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಚ್ಚಿದ ಪ್ರಕರಣದ ತನಿಖೆಯನ್ನ ನಡೆಸಿ ಪ್ರಾಥಮಿಕ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.
ಬೆಂಗಳೂರು ಗಲಭೆ ಪ್ರಕರಣ ಎರಡು ಭಾಗವಾಗಿ ತನಿಖೆ ನಡೆಯುತ್ತಿದ್ದು, ಶಾಸಕ ಅಖಂಡ ಮನೆಯ ಬೆಂಕಿ ಹಚ್ಚಿದ ಪ್ರಕರಣವನ್ನ ಸಿಸಿಬಿ ನಡೆಸಿದರೆ, ಠಾಣೆಗೆ ಬೆಂಕಿ, ಮುಸ್ಲಿಂ ಸಮುದಾಯದ ಗುರುಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಗೂ ಗೋಲಿಬಾರ್ ಪ್ರಕರಣದ ತನಿಖೆಯನ್ನು ಎನ್ಐಎ ನಡೆಸುತ್ತಿದೆ.
ಅಖಂಡ ಶ್ರೀನಿವಾಸ ಮೂರ್ತಿಯನ್ನು ರಾಜಕೀಯವಾಗಿ ಅಂತ್ಯಗೊಳಿಸಲು ಸ್ಕೆಚ್..?
ಈಗ ಸದ್ಯಕ್ಕೆ ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಈ ವರದಿಯಲ್ಲಿ ರಾಜಕೀಯ ದ್ವೇಷದ ಬಗ್ಗೆ ಉಲ್ಲೇಖ ಮಾಡಲಾಗಿದೆ ಎನ್ನಲಾಗ್ತಿದೆ.
ಆರೋಪಿ ನವೀನ್ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಅನ್ನು ಮುಂದಿಟ್ಟುಕೊಂಡು ರಾಜಕೀಯವಾಗಿ ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಮುಗಿಸಲು ಸಂಪತ್ ರಾಜ್ ಸಂಚು ರೂಪಿಸಿರುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಗಲಭೆಯನ್ನು ಎನ್ಕ್ಯಾಶ್ ಮಾಡಿದ್ದು ಏಕೆ..?
ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸಂಪತ್ ರಾಜ್ ಹಿಂದಿನ ಬಾರಿ ಮುಖಭಂಗವಾಗಿತ್ತು. ಅಲ್ಲದೆ ಅಖಂಡ ಶ್ರೀನಿವಾಸಮೂರ್ತಿ ಪುಲಿಕೇಶಿನಗರದಲ್ಲಿ ತನ್ನದೇ ಛಾಪು ಮೂಡಿಸಿದ್ದರು. ಹೀಗಾಗಿ ಅಖಂಡ ಅವರನ್ನು ರಾಜಕೀಯವಾಗಿ ಮುಗಿಸಲು ಸಂಪತ್ ರಾಜ್ ಸಮಯಕ್ಕಾಗಿ ಕಾಯುತ್ತಿದ್ದು, ನವೀನ್ ಫೇಸ್ಬುಕ್ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದಾಗ ತನ್ನ ಪಿ ಎ ಅರುಣ್ ಮೂಲಕ ಸಂಪತ್ ರಾಜ್ ಪ್ರಚೋದನೆ ನೀಡಿದರು ಎನ್ನಲಾಗ್ತಿದೆ.
ಭಯೋತ್ಪಾದಕರ ಲಿಂಕ್ ಪತ್ತೆ ಹಚ್ಚುತ್ತಿದೆ ಎನ್ಐಎ..!
ಬೆಂಗಳೂರು ಗಲಭೆಗೆ ಭಯೋತ್ಪಾದಕರ ಲಿಂಕ್ ದೃಢಪಟ್ಟಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ತನಿಖಾದಳ ರಂಗ ಪ್ರವೇಶ ಮಾಡಿದೆ. ಈಗಾಗಲೇ 18 ಮಂದಿ ಪೊಲೀಸರ ಹೇಳಿಕೆಯನ್ನು ಎನ್ಐಎ ದಾಖಲಿಸಿದೆ. ಪೊಲೀಸ್ ಠಾಣೆಗಳ ಬಳಿ ಗಲಭೆ, ನವೀನ್ ಮನೆಗೆ ಬೆಂಕಿ ಹಚ್ಚಿದ ಪ್ರಕರಣ, ಗಲಭೆ ನಡೆದ ಸ್ಥಳದಲ್ಲಿ ಪೊಲೀಸರಿಂದ ಗೋಲಿಬಾರ್ ಮುಂತಾದ ಪ್ರಕರಣಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಬೇಕಿದೆ.
ನವೀನ್ ಪೋಸ್ಟ್ ಹಾಕಿದ್ದಕ್ಕೆ ಮುಸ್ಲಿಂ ಸಮುದಾಯ ಹಾಗೂ ಎಸ್ಡಿಪಿಐ ಮುಖಂಡರು ಗರಂ ಆಗಿದ್ದರು. ಇದನ್ನೇ ಭಯೋತ್ಪಾದಕ ಸಂಘಟನೆಯವರು ಗಾಳವಾಗಿ ಬಳಸಿದ್ದಾರೆ. ಇದರ ನಡುವೆ ರಾಜಕೀಯ ವಿಚಾರವನ್ನ ಕೂಡ ಗಾಳವಾಗಿ ಮಾಜಿ ಮೇಯರ್ ಸಂಪತ್ ಬಳಕೆ ಮಾಡಿದ್ದಾರೆ ಎನ್ನಲಾಗಿದ್ದು, ಈಗಾಗಲೇ ಆರೋಪಿಗಳ ಮೇಲೆ ಯುಎಪಿಎ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ರಾಷ್ಟ್ರೀಯ ತನಿಖಾ ದಳ ವಿಚಾರಣೆ ನಡೆಸುತ್ತಿದೆ.
ಈಗ ಅಖಂಡ ಮನೆಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಾರ್ಕಿಕ ಅಂತ್ಯ ಕೊಟ್ಟು ಬೆಂಗಳೂರು ಗಲಭೆಯ ಆರೋಪಿಗಳಾದ ಸಂಪತ್ ರಾಜ್ ಹಾಗೂ ಜಾಕೀರ್ ಹುಸೇನ್ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ. ಭಯೋತ್ಪಾದನೆಯ ಆಯಾಮದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ತನಿಖಾದಳದ ತನಿಖೆ ಎಲ್ಲಿಗೆ ತಲುಪುತ್ತದೆಯೋ ಕಾದು ನೋಡಬೇಕಿದೆ.