ಬೆಂಗಳೂರು: ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ಸಾರಾಯಿಪಾಳ್ಯದ ಜ್ಯುವೆಲ್ಲರಿ ಶಾಪ್ನ ಗೋಡೆ ಕೊರೆದ ಖದೀಮರು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.
ಸಾರಾಯಿಪಾಳ್ಯದ ಶ್ರೀ ರಾಘವೇಂದ್ರ ಜ್ಯುವೆಲ್ಲರಿ ಅಂಗಡಿಗೆ ಬುಧವಾರ ತಡರಾತ್ರಿ ಡ್ರಿಲ್ಲಿಂಗ್ ಮಷಿನ್ನಿಂದ ಗೋಡೆ ಕೊರೆದು ಸುಮಾರು 1 ಕೆಜಿ ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿದ್ದಾರೆ. ಜೊತೆಗೆ ಹೋಗುವಾಗ ಅಲ್ಲಿದ್ದ ಸಿಸಿಟಿವಿ ಡಿವಿಆರ್ ಹೊತ್ತೊಯ್ದಿದ್ದಾರೆ. ಎಂದಿನಂತೆ ಬೆಳಿಗ್ಗೆ ಮಾಲೀಕರು ಅಂಗಡಿ ಓಪನ್ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಹೆಣ್ಣೂರು ಠಾಣೆ ಪೊಲೀಸರು ಆಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಖದೀಮರನ್ನು ಹಿಡಿಯಲು ವಿಶೇಷ ತಂಡ ರಚಿಸಿ ಶೋಧಕಾರ್ಯ ಚುರುಕುಗೊಳಿದ್ದಾರೆ.
ಗೋಡೆ ಕೊರೆದು 1ಕೆಜಿ ಚಿನ್ನ ಕದ್ದ ಕಳ್ಳರು ಪ್ರಕರಣದ ಮಾಹಿತಿ ನೀಡಿರುವ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ ಗುಳೇದ್, 'ನಿನ್ನೆ ರಾತ್ರಿ ಸಾರಾಯಿ ಪಾಳ್ಯದಲ್ಲಿ ರಾಘವೇಂದ್ರರಾವ್ ಜ್ಯುವೆಲ್ಲರಿ ಶಾಪ್ನಲ್ಲಿ ಕಳ್ಳತನವಾಗಿದೆ. ಸುಮಾರು ಒಂದು ಕೆಜಿ ಚಿನ್ನ ಹೋಗಿದೆ ಎಂದು ಅಂಗಡಿ ಮಾಲೀಕ ದೂರು ನೀಡಿದ್ದಾರೆ. ತುಂಬಾ ಪ್ಲಾನ್ ಮಾಡಿ ಕಳ್ಳರು ಕಳ್ಳತನ ಮಾಡಿದ್ದಾರೆ. ಡ್ರಿಲ್ಲಿಂಗ್ ಮಷಿನ್ನಿಂದ ಗೋಡೆ ಕೊರೆದಿದ್ದಾರೆ. ಒಬ್ಬ ಒಳಗಡೆ ಹೋಗಿ, ಮತ್ತೊಬ್ಬ ಗೋಡೆ ಹೊರಗೆ ನಿಂತು ಕೃತ್ಯ ಎಸಗಿದ್ದಾರೆ. ಅಂಗಡಿ ಒಳಗಡೆಯಿಂದ ಚಿನ್ನಾಭರಣಗಳನ್ನ ಒಬ್ಬ ಚೀಲದಲ್ಲಿ ತುಂಬಿ ಹೊರಗಡೆ ನಿಂತಿದ್ದವನಿಗೆ ಕೊಟ್ಟಿದ್ದಾನೆ. ಗೋಡೆ ಕೊರೆಯೋಕೆ ಉಪಯೋಗಿಸಿದ್ದ ವಸ್ತುಗಳನ್ನ ಅಲ್ಲೇ ಬಿಟ್ಟು ಹೋಗಿದ್ದಾರೆ. ಸದ್ಯ ಆರೋಪಿಗಳ ಪತ್ತೆಗಾಗಿ ಬಲೆ ಬೀಸಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹಿಜಾಬ್ ನಿರ್ಬಂಧ ವಿದ್ಯಾರ್ಥಿಗಳಿಗಷ್ಟೇ ಶಿಕ್ಷಕರಿಗಲ್ಲ: ಫೆ.10ರ ಆದೇಶಕ್ಕೆ ಸ್ಪಷ್ಟನೆ ನೀಡಿದ ಕೋರ್ಟ್