ಬೆಂಗಳೂರು :ಮಹಿಳೆಯರು ಪ್ರತಿಭೆ ಮತ್ತು ಸಾಮರ್ಥ್ಯಗಳಲ್ಲಿ ಪುರುಷರಿಗೆ ಸರಿಸಮನಾಗಿದ್ದಾರೆ. 2 ಮತ್ತು 3ನೇ ಹಂತದ ನಗರಗಳಲ್ಲಿ ಉದ್ಯಮಶೀಲತೆಗೆ ಅಪಾರ ಅವಕಾಶಗಳಿವೆ. ಮಹಿಳಾ ಸಮೂಹವನ್ನು ಸಕಾರಾತ್ಮಕವಾಗಿ ಬಿಂಬಿಸಿದರೆ ದೇಶದಲ್ಲಿ 15 ಕೋಟಿ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಪೋರ್ಟಿಯಾ ಮೆಡಿಕಲ್ ಕಂಪನಿಯ ಸಹ-ಸಂಸ್ಥಾಪಕಿ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಮೀನಾ ಗಣೇಶ್ (Meena Ganesh) ಹೇಳಿದ್ದಾರೆ.
ಬೆಂಗಳೂರು ತಂತ್ರಜ್ಞಾನ ಶೃಂಗಸಭೆ-2021 (Bengaluru Tech Summit 2021)ರ ಮೊದಲ ದಿನವಾದ ಬುಧವಾರ ನಡೆದ 'ಮಹಿಳಾ ಉದ್ಯಮಶೀಲತೆ: ಸವಾಲುಗಳು ಮತ್ತು ಪರಿಹಾರಗಳು' ವಿಚಾರಗೋಷ್ಠಿಯಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಿಳೆಯರ ದೃಷ್ಟಿಯಿಂದ ಹೇಳುವುದಾದರೆ ಕಳೆದ 20 ವರ್ಷಗಳಲ್ಲಿ ಪರಿಸ್ಥಿತಿ ಸಾಕಷ್ಟು ಸಕಾರಾತ್ಮಕವಾಗಿ ಬದಲಾಗಿದೆ. ಆದ್ದರಿಂದ ಹೆಣ್ಣು ಮಕ್ಕಳನ್ನು ಕೆಲವೇ ಉದ್ಯೋಗಗಳಿಗೆ ಸೀಮಿತಗೊಳಿಸಬಾರದು. ಕರ್ನಾಟಕದಲ್ಲಂತೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಹೇರಳ ಅವಕಾಶಗಳಿವೆ. ಮಹಿಳಾ ಸಾಹಸಿಗಳಿಗೆ ಅಗತ್ಯ ಬಂಡವಾಳ ವ್ಯವಸ್ಥೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಉದ್ಯಮಶೀಲತೆ ಬೆಳೆಯಬೇಕಾದರೆ ನಾವು ಹೆಚ್ಚು ರೋಲ್ ಮಾಡೆಲ್‌ಗಳನ್ನು ಬಿಂಬಿಸಬೇಕು. ಜೊತೆಗೆ ಶಿಕ್ಷಣ ಕ್ರಮದಲ್ಲಿ ಪದವಿ ಮಟ್ಟದಲ್ಲಾದರೂ ಉದ್ಯಮಶೀಲತೆಯ ಬಗ್ಗೆ ಅರಿವು ಮೂಡಿಸಬೇಕು. ಇದರಿಂದ ದೇಶದ ಆರ್ಥಿಕ ವ್ಯವಸ್ಥೆಗೆ ಬಲು ದೊಡ್ಡ ಶಕ್ತಿ ಬರುತ್ತದೆ ಎಂದು ಮೀನಾ ಸಲಹೆ ನೀಡಿದರು.
ಶುಗರ್ ಕಾಸ್ಮೆಟಿಕ್ಸ್ ಕಂಪನಿಯ ಸಹ ಸಂಸ್ಥಾಪಕಿ ಮತ್ತು ಸಿಇಒ ಸಾಕ್ಷಿ ಚೋಪ್ರಾ (Sakshi Chopra) ಮಾತನಾಡಿ, ಕಂಪನಿಗಳಲ್ಲಿ ಮಹಿಳೆಯರಿಗೆ ಉನ್ನತ ಮಟ್ಟದಲ್ಲಿ ಅಧಿಕಾರ ಮತ್ತು ನಿರ್ಧಾರವನ್ನು ತೆಗೆದುಕೊಳ್ಳುವ ಅವಕಾಶಗಳು ಹೆಚ್ಚು ಹೆಚ್ಚು ಸಿಗಬೇಕು. ಹೀಗಾದರೆ, ಬಂಡವಾಳ ಕ್ರೋಢೀಕರಿಸಲು ಸುಲಭವಾಗುತ್ತದೆ ಎಂದರು.
ಉದ್ಯಮಶೀಲತೆ ಎಂದರೆ ಕೇವಲ ದೊಡ್ಡ ನಗರಗಳತ್ತ ನೋಡುವುದೆಂದು ಅರ್ಥವಲ್ಲ. ಇಲ್ಲಿನ ಸಣ್ಣಪುಟ್ಟ ಪೇಟೆ-ಪಟ್ಟಣಗಳು ನಿಜಕ್ಕೂ ಭಾರತದ ಹೃದಯದಂತಿವೆ. ಇಲ್ಲಿರುವ ಉಜ್ವಲ ಅವಕಾಶಗಳನ್ನು ಉದ್ಯಮಶೀಲ ಮಹಿಳೆಯರು ಬಳಸಿಕೊಳ್ಳಬೇಕು. ಇದರಿಂದ ನಷ್ಟದ ಸಂಭವನೀಯತೆ ತಾನಾಗಿಯೇ ನಗಣ್ಯವಾಗುತ್ತದೆ ಎಂದು ಅವರು ಕಿವಿಮಾತು ನುಡಿದರು.
ಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಸಿಕೋಯಿಯಾ ಕ್ಯಾಪಿಟಲ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕಿ ವಿನೀತಾ ಸಿಂಗ್ (Vineeta Singh), ಮಹಿಳೆಯರು ಎಲ್ಲ ಸಮಸ್ಯೆಗಳನ್ನೂ ಲಿಂಗ ತಾರತಮ್ಯಕ್ಕೆ ತಳುಕು ಹಾಕಬಾರದು. ದೇಶದಲ್ಲಿ ಈಗ ಲಿಂಗ ಸಮಾನತೆ ವ್ಯಾಪಕವಾಗಿ ಕಂಡು ಬರುತ್ತಿದೆ.
ಕಳೆದ 5-6 ವರ್ಷಗಳಿಂದ ಮಹಿಳೆಯರು ದೊಡ್ಡ ಗ್ರಾಹಕ ಶಕ್ತಿಯಾಗಿ ಹೊರಹೊಮ್ಮಿದ್ದಾರೆ. ಇದು ಸ್ತ್ರೀ ಸಮೂಹಕ್ಕೆ ವರದಾನವಾಗಿದೆ. ಕೋವಿಡ್ ನಂತರದ ಸಂದರ್ಭವಂತೂ ಮಹಿಳೆಯರಿಗೆ ಸದವಕಾಶ ಸೃಷ್ಟಿಸಿದೆ ಎನ್ನುವ ಮೂಲಕ ಗಮನ ಸೆಳೆದರು.
ಮಹಿಳಾ ಉದ್ಯಮಿಗಳು ಒಳ್ಳೆಯ ತಂಡ ಕಟ್ಟುವುದಕ್ಕೆ ಮತ್ತು ಪ್ರತಿಭಾವಂತ ಅನುಭವಿಗಳ ನೇಮಕಕ್ಕೆ ಒತ್ತು ಕೊಡಬೇಕು. ಇದರ ಜತೆಗೆ ಬಂಡವಾಳ ಕ್ರೋಢೀಕರಣವನ್ನು ಸರಕಾರ ಮತ್ತು ಖಾಸಗಿ ವಲಯದ ಉದ್ದಿಮೆಗಳು ಸುಲಭಗೊಳಿಸಬೇಕು ಎಂದು ನುಡಿದರು. ಹಿರಿಯ ಪತ್ರಕರ್ತೆ ಅರ್ಚನಾ ರಾಯ್ ಸಂವಾದವನ್ನು ನಡೆಸಿಕೊಟ್ಟರು.