ಬೆಂಗಳೂರು:ಪ್ರಧಾನಿ ಮೋದಿ ಬೆಂಗಳೂರಿಗರ ಮೂರು ದಶಕಗಳ ಉಪನಗರ ರೈಲು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಆ ಮೂಲಕ ಉಪನಗರ ರೈಲ್ವೆ ಯೋಜನೆ ಕಾಮಗಾರಿಗೆ ಸ್ವಲ್ಪ ಚುರುಕು ಮುಟ್ಟುವ ಆಶಾಕಿರಣ ಮೂಡಿದೆ. ಆದರೆ, ಯೋಜನೆ ಅನುಷ್ಠಾನ ಪ್ರಗತಿ ನೋಡಿದರೆ, ಪ್ರಧಾನಿ ಮೋದಿ ಉಪನಗರ ರೈಲ್ವೆ ಯೋಜನೆ ಕಾಮಗಾರಿಗಾಗಿನ ಶಂಕುಸ್ಥಾಪನೆ ಸಾಂಕೇತಿಕವಾಗಿಯೇ ಉಳಿಯಲಿದಿಯಾ ಎಂಬ ಅನುಮಾನ ಮೂಡಿದೆ.
ಪ್ರಧಾನಿ ಮೋದಿ ಇಂದು ಬೆಂಗಳೂರಿಗರ ಬಹುನಿರೀಕ್ಷೆಯ ಕನಸಿನ ಉಪನಗರ ರೈಲು ಯೋಜನೆಗೆ ಅಡಿಪಾಯ ಹಾಕಿದ್ದಾರೆ. ರಾಜ್ಯ ಸರ್ಕಾರ ಪ್ರಧಾನಿ ಮೋದಿ ಕೈಯಿಂದಲೇ ಈ ಮಹತ್ವಾಕಾಂಕ್ಷೆಯ ಯೋಜನೆಯ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿಸಿದ್ದಾರೆ. ವಿಧಾನಸಭೆ ಚುನಾವಣೆ ಸನಿಹದಲ್ಲೇ ಇದ್ದು, ಬಿಬಿಎಂಪಿ ಚುನಾವಣೆ ಹೊಸ್ತಿಲಲ್ಲೇ ಇರುವ ಈ ಹಿನ್ನೆಲೆ ರಾಜ್ಯ ಬಿಜೆಪಿ ಸರ್ಕಾರ ಪ್ರಧಾನಿ ಮೋದಿ ಮೂಲಕ ಯೋಜನೆ ಕಾಮಗಾರಿಗೆ ಅಡಿಪಾಯ ಹಾಕುವ ಕೆಲಸ ಮಾಡಿದೆ.
30 ವರ್ಷಗಳ ಕನಸು: 148 ಕಿ.ಮೀ. ಉದ್ದದ ನಾಲ್ಕು ಕಾರಿಡಾರ್ಗಳ 15,767 ಕೋಟಿ ಅಂದಾಜು ವೆಚ್ಚದ ಈ ಯೋಜನೆ ಬೆಂಗಳೂರಿಗರ ಸುಮಾರು 30 ವರ್ಷಗಳ ಕನಸಾಗಿದೆ. ಹಲವು ಅಡೆತಡೆ, ವಿಘ್ನಗಳು, ಡೆಡ್ ಲೈನ್ ಬಳಿಕ ಇದೀಗ ಯೋಜನೆ ಕಾಮಗಾರಿ ಅನುಷ್ಠಾನವಾಗುವ ಲಕ್ಷಣ ಕಾಣುತ್ತಿದೆ. ಮೋದಿ ಏನೋ ಯೋಜನೆಯ ಕಾಮಗಾರಿಗೆ ಅಡಿಪಾಯ ಹಾಕಿದ್ದಾರೆ.
ಬೆಂಗಳೂರಿನಿಂದ ದೇವನಹಳ್ಳಿ (41.40 ಕಿ.ಮೀ), ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರ (25.01 ಕಿ.ಮೀ), ಕೆಂಗೇರಿ-ಬೆಂಗಳೂರು ಕಂಟೋನ್ ಮೆಂಟ್ (35.52 ಕಿ.ಮೀ.) ಮತ್ತು ಹೀಲಲಿಗೆ-ರಾಜನುಕುಂಟೆ (46.24 ಕಿ.ಮೀ) ನಾಲ್ಕು ಕಾರಿಡಾರ್ನಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಆದರೆ, ವಾಸ್ತವದಲ್ಲಿ ಈ ಕಾರಿಡಾರ್ ಕಾಮಗಾರಿಗಳ ಆರಂಭವೇ ಇನ್ನೂ ವಿಳಂಬವಾಗಲಿದೆ.
ಒಂದೇ ಒಂದು ಕಾರಿಡಾರ್ ಕಾಮಗಾರಿಯ ಕಾರ್ಯಾದೇಶ ಆಗಿಲ್ಲ:ಪ್ರಧಾನಿ ಮೋದಿ ಏನೋ ಉಪನಗರ ರೈಲು ಯೋಜನೆಗೆ ಅಡಿಪಾಯ ಹಾಕಲಿದ್ದಾರೆ. ಆದರೆ ವಾಸ್ತವದಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದುವ ಒಂದೇ ಒಂದು ಕಾರಿಡಾರ್ಗೆ ಕಾರ್ಯಾದೇಶ ಹೊರಡಿಸಲು ಸಾಧ್ಯವಾಗಿಲ್ಲ.
ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರದ ಕಾರಿಡಾರ್ ಬಿಟ್ಟರೆ ಮಿಕ್ಕ ಮೂರು ಕಾರಿಡಾರ್ಗಳ ಅನುಷ್ಠಾನ ಇನ್ನೂ ಪ್ರಾಥಮಿಕ ಪೂರ್ವಸಿದ್ಧತಾ ಹಂತದಲ್ಲೇ ಇದೆ. ಕಾರಿಡಾರ್ಗಳ ಸಿವಿಲ್ ಕಾಮಗಾರಿಯ ಟೆಂಡರ್ ಕರೆಯಲು ಇನ್ನೂ ವರ್ಷಗಳೇ ಬೇಕಾಗಲಿದೆ. ಹಾಗಾಗಿ ಯೋಜನೆ ನನಸಾಗಲು ಇನ್ನೂ ಏಳೆಂಟು ವರ್ಷಗಳೇ ಬೇಕಾಗಬಹುದು ಎನ್ನಲಾಗುತ್ತಿದೆ.
ಕಾರಿಡಾರ್ ಯಾವ ಹಂತದಲ್ಲಿ ಇದೆ?: ಕಾರಿಡಾರ್-1 (ಸಂಪಿಗೆ): ಬೆಂಗಳೂರು- ದೇವನಹಳ್ಳಿ (41.40 ಕಿ.ಮೀ) ಕಾರಿಡಾರ್ ಯೋಜನೆಯು 15 ನಿಲ್ದಾಣಗಳನ್ನು ಹೊಂದಲಿದೆ. ಇದರ ಜಿಯೋ ತಾಂತ್ರಿಕ ಸಮೀಕ್ಷೆ ಶೇಕಡಾ 90ರಷ್ಟು ಪೂರ್ಣವಾಗಿದ್ದು, ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ. ಸಿವಿಲ್ ಕಾಮಗಾರಿಗಾಗಿ ಟೆಂಡರ್ ಇನ್ನೂ ವಿಳಂಬ ಆಗಿರುವ ಕಾರಣ ಇನ್ನೂ ಪೂರ್ವಸಿದ್ಧತಾ ಹಂತದಲ್ಲಿ ಪ್ರಕ್ರಿಯೆ ಇದೆ.
ಕಾರಿಡಾರ್-2 (ಮಲ್ಲಿಗೆ):ಬೈಯಪ್ಪನಹಳ್ಳಿ-ಚಿಕ್ಕಬಾಣಾವರ (25.01ಕಿ.ಮೀ) ಯೋಜನೆಯಲ್ಲಿ 14 ನಿಲ್ದಾಣಗಳು ಇರಲಿವೆ. ಭೂ ಸರ್ವೆ, ಯುಟಿಲಿಟಿ ಸರ್ವೆ ಪೂರ್ಣಗೊಂಡಿದೆ. ಫೈನಲ್ ಅಲೈನ್ಮೆಂಟ್ಗೆ ರೈಲ್ವೆ ಇಲಾಖೆ ಅಸ್ತು ಎಂದಿದೆ. ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಸಿವಿಲ್ ವರ್ಕ್ ಟೆಂಡರ್ ಕರೆಯಲಾಗಿದೆ.
ಕಾರಿಡಾರ್-3 (ಪಾರಿಜಾತ):ಕೆಂಗೇರಿ- ಕಂಟೋನ್ ಮೆಂಟ್- ವೈಟ್ ಫೀಲ್ಡ್ (35.52 ಕಿ.ಮೀ.) ಕಾರಿಡಾರ್ ಯೋಜನೆಯಲ್ಲಿ 9 ನಿಲ್ದಾಣಗಳು ಇರಲಿವೆ. ಜಿಯೋ-ತಾಂತ್ರಿಕ ಸರ್ವೆ ಪೂರ್ಣಗೊಂಡಿದ್ದು, ಯುಟಿಲಿಟಿ, ಭೂ ಸರ್ವೆ ಪ್ರಕ್ರಿಯೆ ಪ್ರಗತಿಯಲ್ಲಿದೆ. ಹಾಗೇ ಭೂ ಸ್ವಾಧೀನ ಪ್ರಕ್ರಿಯೆಯೂ ಪ್ರಗತಿಯಲ್ಲಿದೆ. ಸಿವಿಲ್ ಕಾಮಗಾರಿ ಟೆಂಡರ್ ಇನ್ನೂ ವಿಳಂಬ ಇರುವ ಕಾರಣ ಇನ್ನೂ ಪೂರ್ವಸಿದ್ಧತಾ ಹಂತದಲ್ಲಿ ಪ್ರಕ್ರಿಯೆ ಇದೆ.
ಕಾರಿಡಾರ್-4 (ಕನಕ):ಹೀಲಲಿಗೆ-ರಾಜನುಕುಂಟೆ (46.24 ಕಿ.ಮೀ) ಕಾರಿಡಾರ್ ಯೋಜನೆಯಲ್ಲಿ 19 ನಿಲ್ದಾಣಗಳಿರಲಿವೆ. ಈ ಕಾರಿಡಾರ್ನ ಜಿಯೋ ತಾಂತ್ರಿಕ ಸರ್ವೆ ಪೂರ್ಣಗೊಂಡಿದ್ದು, ಫೈನಲ್ ಅಲೈನ್ ಮೆಂಟ್ಗೆ ರೈಲ್ವೆ ಇಲಾಖೆ ಒಪ್ಪಿಗೆ ನೀಡಿದೆ. ಭೂ ಸ್ವಾಧೀನ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಭೂ ಸ್ವಾಧೀನ ಪ್ರಕ್ರಿಯೆ:ಯೋಜನೆಗಾಗಿ ಸುಮಾರು 508 ಎಕರೆ ಜಮೀನು ಬೇಕಾಗಿದೆ. ಈ ಪೈಕಿ 327 ಎಕರೆ ರೈಲ್ವೆ ಭೂಮಿಯಾಗಿದೆ. 153 ಎಕರೆ ಕರ್ನಾಟಕ ಸರ್ಕಾರದ್ದಾಗಿದೆ. ಸುಮಾರು 102 ಎಕರೆ ಖಾಸಗಿ ಮಾಲೀಕತ್ವದ್ದಾಗಿದೆ. ಕೆ-ರೈಡ್ ಅಧಿಕಾರಿ ಮಾಹಿತಿ ಪ್ರಕಾರ ಈವರೆಗೆ ಸುಮಾರು 85% ಭೂ ಸ್ವಾಧೀನ ಕಾರ್ಯ ಪೂರ್ಣಗೊಂಡಿದೆ. ಆದರೆ ಯೋಜನೆಗಾಗಿ ಬೇಕಾಗಿರುವ ಸುಮಾರು 102 ಎಕರೆ ಖಾಸಗಿ ಮಾಲೀಕತ್ವದ ಭೂಸ್ವಾಧೀನ ಕಾರ್ಯ ವಿಳಂಬವಾಗುತ್ತಿದೆ.
ರಾಜ್ಯ ಸರ್ಕಾರ ಮಾಲೀಕತ್ವದ ಸುಮಾರು 5% ಭೂಮಿಯನ್ನು ಸ್ವಾಧೀನ ಪಡಿಸಬೇಕಾಗಿದ್ದು, ಉಳಿದಂತೆ ಸುಮಾರು 10% ಭೂಮಿಯನ್ನು ಖಾಸಗಿಯವರಿಂದ ಸ್ವಾಧೀನ ಪಡಿಸಬೇಕಾಗಿದೆ. ಇದರ ಸ್ವಾಧೀನಕ್ಕಾಗಿ 1,419 ಕೋಟಿ ರೂ. ವೆಚ್ಚವಾಗಲಿದೆ.
ಇದನ್ನೂ ಓದಿ:ಚಾಲಕ ರಹಿತ ಮೆಟ್ರೋ ರೈಲು ಚಾಲನೆಗೆ ಬಿ.ಎಂ.ಆರ್.ಸಿ.ಎಲ್ ಸಿದ್ಧತೆ