ಬೆಂಗಳೂರು:ಸ್ವಪಕ್ಷೀಯ ಶಾಸಕನ ನಿವಾಸದ ಮೇಲೆ ದಾಳಿ ನಡೆದಿರುವ ಜೊತೆಗೆ ಮಹಾ ನಗರದಲ್ಲಿ ಪ್ರಕ್ಷುಬ್ಧ ಸ್ಥಿತಿ ನಿರ್ಮಾಣವಾಗಿದ್ದರೂ ಕಾಂಗ್ರೆಸ್ ನಾಯಕರು ಮೌನವಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರಳಿಯ ಅವಹೇಳನಕಾರಿ ಬರಹ ಪೋಸ್ಟ್ ಮಾಡಿದ ಕಾರಣದಿಂದಾಗಿ ಅಲ್ಪಸಂಖ್ಯಾತ ಸಮುದಾಯದವರು ಶಾಸಕರ ನಿವಾಸದ ಮೇಲೆ ದಾಳಿ ಮಾಡಿದ್ದಾರೆ. ಅಲ್ಲದೇ ಸಾರ್ವಜನಿಕ ವಾಹನಗಳನ್ನು ಜಖಂಗೊಳಿಸಿದ್ದಾರೆ. ರಾತ್ರಿ ಇಡೀ ಸಾಕಷ್ಟು ಘಟನೆಗಳು ನಡೆದಿದ್ದು, ಪೊಲೀಸರ ಗುಂಡಿಗೆ ಮೂವರು ಬಲಿಯಾಗಿದ್ದಾರೆ. ನಗರದಲ್ಲಿ 144ನೇ ಸೆಕ್ಷನ್ ಜಾರಿಯಲ್ಲಿದ್ದು, ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾಂಗ್ರೆಸ್ ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿರುವುದು ಅಚ್ಚರಿಗೆ ಕಾರಣವಾಗಿದೆ.
ಕೇವಲ ಶಾಸಕ ಜಮೀರ್ ಅಹಮದ್ ಖಾನ್ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ನೀಡಿದ್ದನ್ನು ಹೊರತುಪಡಿಸಿದರೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆಗಲಿ ಅಥವಾ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗಲಿ ಇದುವರೆಗೂ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಎರಡು ಸಮುದಾಯಗಳ ನಡುವೆ ತಡರಾತ್ರಿ ನಡೆದ ಘರ್ಷಣೆಯ ಮಾಹಿತಿ ಇದ್ದು, ಕಾಂಗ್ರೆಸ್ ನಾಯಕರು ಮೌನವಾಗಿರುವುದು ಹಲವರ ಟೀಕೆಗೂ ಅವಕಾಶ ಮಾಡಿಕೊಟ್ಟಿದೆ. ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದು, ಯಾರೂ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಈ ನೆಲದ ಕಾನೂನಿಗೆ ಎಲ್ಲರೂ ಗೌರವ ಕೊಡಲೇಬೇಕು. ಪ್ರಚೋದನೆಗೊಳಗಾಗಿ ಹಿಂಸಾಕೃತ್ಯದಲ್ಲಿ ತೊಡಗುವುದು ಅಕ್ಷಮ್ಯ. ಪೊಲೀಸರು ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಪ್ರವಾದಿ ಪೈಗಂಬರ್ ಬಗ್ಗೆ ನಿಂದಾನಾತ್ಮಕವಾಗಿ ಯಾರೇ ಬರೆದಿದ್ದರೂ ಅದನ್ನು ನಾನು ಖಂಡಿಸುತ್ತೇನೆ. ಅದು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುವ ಕೆಲ ಕಿಡಿಗೇಡಿಗಳ ಕೆಲಸ. ಆದರೆ ಪುಲಕೇಶಿ ನಗರದಲ್ಲಿ ಶಾಸಕ ಅಖಂಡ ಶ್ರೀನಿವಾಸ್ ಮನೆ ಮೇಲಿನ ದಾಳಿ ಮತ್ತು ಪೊಲೀಸ್ ಠಾಣೆಯ ಮೇಲಿನ ದಾಳಿ ದುರದೃಷ್ಟಕರ ಎಂದಿದ್ದಾರೆ.