ಬೆಂಗಳೂರು:ಪಾದಚಾರಿಗೆ ಡಿಕ್ಕಿ ಹೊಡೆದು ಆರೋಪಿ ಪರಾರಿಯಾಗಿದ್ದ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಸುಮಾರು 58 ಸಿಸಿ ಕ್ಯಾಮರಾ ಪರಿಶೀಲನೆ ಬಳಿಕ ಆರೋಪಿ ಮತ್ತು ಆತನ ಕಾರನ್ನು ಪತ್ತೆ ಹಚ್ಚಿದ್ದಾರೆ.
ಕಳೆದ ತಿಂಗಳಲ್ಲಿ ಕೆ.ಆರ್.ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕಸ್ತೂರಿ ನಗರ 2ನೇ ಮುಖ್ಯರಸ್ತೆಯಲ್ಲಿ ಪಾದಚಾರಿಗೆ ಡಿಕ್ಕಿ ಹೊಡೆದ ಬಳಿಕ ಕಾರು ಸಹಿತ ಚಾಲಕ ಪರಾರಿಯಾಗಿದ್ದ. ಬಳಿಕ ಗಾಯಾಳುವನ್ನು ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಮೃತಪಟ್ಟಿದ್ದ.
ಈ ಸಂಬಂಧ ಕೆ.ಆರ್.ಪುರ ಸಂಚಾರಿ ಪೊಲೀಸರು 115/21ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು. ಮೃತನ ಕುಟುಂಬಕ್ಕೆ ನ್ಯಾಯ ಕೊಡಿಸಲು ಸಾಕಷ್ಟು ಪರಿಶ್ರಮ ಪಟ್ಟು ಸುಮಾರು 58 ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ಮಾಡಿ ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕೆ.ಆರ್.ಪುರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಮಹಮದ್ ಎಂ.ಎ ಅವರ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಆರೋಪಿ ಕಾರು ಯಾವುದು ಎಂಬ ಬಗ್ಗೆ ಸುಮಾರು 50ಕ್ಕೂ ಅಧಿಕ ಸಿಸಿಟಿವಿ ಫೂಟೇಜ್ಗಳನ್ನು ಪರಿಶೀಲಿಸಲಾಗಿದ್ದು, ಯಾವುದೇ ಸಿಸಿಟಿವಿ ಕ್ಯಾಮರಾದಲ್ಲಿ ಕಾರು ಎರ್ಟಿಗಾ ಎಂದು ಗೊತ್ತಾಗಿದ್ದು, ಕಾರು ಸಂಖ್ಯೆ ಲಭ್ಯವಾಗಿರಲಿಲ್ಲ.