ಬೆಂಗಳೂರು:ಜಮ್ಮು ಕಾಶ್ಮೀರದಲ್ಲಿ ಹಿಂದುಗಳ ಮಾರಣಹೋಮದ ರೂವಾರಿಯನ್ನು ಬೆಂಗಳೂರಿನಲ್ಲಿ ಬಂಧಿಸಿದ ಬಳಿಕ ಇದೀಗ, ಬೆಂಗಳೂರು ಗ್ರಾಮಾಂತರ ಪೊಲೀಸರು ಅಕ್ರಮವಾಗಿ ಬಾಂಗ್ಲಾದೇಶಿ ನುಸುಳುಕೋರರಿಗೆ, ಆಧಾರ್ ಕಾರ್ಡ್ ಹಾಗೂ ಇನ್ನಿತರ ದಾಖಲೆಗಳನ್ನು ಒದಗಿಸುತ್ತಿದ್ದ ಜಾಲವನ್ನು ಭೇದಿಸುವಲ್ಲಿ ಸಫಲರಾಗಿದ್ದಾರೆ. ಪೊಲೀಸರ ಈ ಕಾರ್ಯವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಶ್ಲಾಘಿಸಿದ್ದಾರೆ.
ಅಧಿಕೃತ ಮಾಹಿತಿಗಳ ಪ್ರಕಾರ, ಈ ಕುರಿತು ತನಿಖೆ ಕೈಗೊಂಡಿದ್ದ ಪೊಲೀಸರು ಅಕ್ರಮ ವಲಸಿಗರಿಗೆ ದಾಖಲೆಗಳನ್ನು ಪೂರೈಸುತ್ತಿದ್ದ 9 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸರಹದ್ದಿನ ಪ್ರದೇಶವೊಂದರಲ್ಲಿ ಎಟಿಎಂ ಜತೆಗೆ 18 ಲಕ್ಷ ರೂಪಾಯಿ ಲೂಟಿ ಪ್ರಕರಣ ನಡೆದಿದ್ದು, ಈ ಸಂಬಂಧ ಅಕ್ರಮವಾಗಿ ದೇಶ ನುಸುಳಿದ್ದ ಬಾಂಗ್ಲಾದೇಶಿ ನಾಗರಿಕೊಬ್ಬನನ್ನು ಬಂಧಿಸಲಾಗಿತ್ತು.
4 ಕೋಟಿ ರೂ. ಬಾಂಗ್ಲಾಗೆ ವರ್ಗಾವಣೆ:ವಿಚಾರಣೆಯ ಸಂದರ್ಭದಲ್ಲಿ ನಕಲಿ ದಾಖಲೆಗಳನ್ನು ಒದಗಿಸುವ ಜಾಲದ ಬಗ್ಗೆ ಸುಳಿವು ಸಿಕ್ಕಿತ್ತು. ಪೊಲೀಸರು ಸಾಕ್ಷ್ಯಾಧಾರಗಳ ಸಮೇತ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ನಕಲಿ ದಾಖಲೆ ಪಡೆದು, ಬೆಂಗಳೂರಿನಲ್ಲಿ ವಾಣಿಜ್ಯ ವ್ಯವಹಾರ ನಡೆಸುತ್ತಿದ್ದ ಅಕ್ರಮ ವಲಸಿಗನೊಬ್ಬ ಸುಮಾರು 4 ಕೋಟಿ ರೂಪಾಯಿಗಳನ್ನು ಬಾಂಗ್ಲಾದೇಶಿ ಕರೆನ್ಸಿಯಾಗಿ(ಟಾಕಾ) ಪರಿವರ್ತಿಸಿ ಆ ದೇಶಕ್ಕೆ ಈಗಾಗಲೇ ವರ್ಗಾವಣೆ ಮಾಡಿದ್ದಾನೆ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.