ಬೆಂಗಳೂರು:ಬೆಂಗಳೂರು ನಗರ ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಬೆಡ್ ಬ್ಲಾಕಿಂಗ್ ದಂಧೆ ಬಯಲು ಬೆನ್ನಲೇ ಇದೇ ಕೃತ್ಯದಲ್ಲಿ ತೊಡಗಿದ್ದ ಮಹಿಳೆ ಸೇರಿ ಇಬ್ಬರನ್ನು ಜಯನಗರ ಪೊಲೀಸರು ಬಂಧಿಸಿದ್ದ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ.
ಕೊರೊನಾ ಸೋಂಕು ಗುಣಲಕ್ಷಣ ಇಲ್ಲದಿದ್ದರೂ ಪಾಸಿಟಿವ್ ಎಂದು ಕಂಡುಬಂದು ಹೋಮ್ ಐಸೋಲೇಷನ್ನಲ್ಲಿದ್ದ ಸೋಂಕಿತರ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಬೆಡ್ ಬ್ಲಾಕ್ ವಂಚನೆ ಜಾಲವನ್ನು ಸಂಸದ ತೇಜಸ್ವಿ ಸೂರ್ಯ ಬಯಲಿಗೆಳೆಯುತ್ತಿದ್ದಂತೆ ಜಯನಗರ ಪೊಲೀಸರು ರೋಹಿತ್ ಹಾಗೂ ನೇತ್ರಾ ಎಂಬುವರನ್ನು ಬಂಧಿಸಿದ್ದರು.
ನಗರ ಪೊಲೀಸ್ ಆಯುಕ್ತರ ಟ್ವೀಟ್
ಕೊರೊನಾ ಸಂಕಷ್ಟ ಸಮಯವನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು, ಆಸ್ಪತ್ರೆಗಳಲ್ಲಿ ಐಸಿಯು ಬೆಡ್ ಕೊಡಿಸುತ್ತೇನೆ. ಜೊತೆಗೆ ಆಕ್ಸಿಜನ್ ಹಾಗೂ ವೆಂಟಿಲೇಟರ್ ಸೌಲಭ್ಯವಿರುವ ಆಸ್ಪತ್ರೆಗೆ ಶಿಫಾರಸ್ಸು ಮಾಡುತ್ತೇನೆ ಎಂದು ವಾಟ್ಸಾಪ್ ಗ್ರೂಪ್ಗಳಲ್ಲಿ ಹರಿಬಿಡುತ್ತಿದ್ದರು. ಬೆಡ್ ಕೋರಿ ಬಿಬಿಎಂಪಿಗೆ ಕರೆ ಮಾಡುವ ರೋಗಿಗಳ ಕುಟುಂಬಸ್ಥರನ್ನು ಸಂಪರ್ಕಿಸಿ ಐಸಿಯು ಬೆಡ್ ಕೊಡಿಸುವುದಾಗಿ ನಂಬಿಸಿ ಒಬ್ಬರಿಂದ ಸುಮಾರು 25 ಸಾವಿರ ಹಣ ಪಡೆದು ವಂಚಿಸುತ್ತಿದ್ದರು. (ಸರ್ಕಾರಿ ಕೋಟಾದ ಬೆಡ್ಗಳ ದುರುಪಯೋಗ.. ಬೆಡ್ ಬುಕ್ಕಿಂಗ್ ದಂಧೆ ಬಹಿರಂಗಪಡಿಸಿದ ಸಂಸದ ತೇಜಸ್ವಿ ಸೂರ್ಯ)
ಸಂಸದ ತೇಜಸ್ಚಿ ಸೂರ್ಯ ಅವರು ಬೆಡ್ ಬ್ಲಾಕಿಂಗ್ ಜಾಲ ಬಯಲು ಬೆನ್ನಲೇ ಇಬ್ಬರನ್ನು ಬಂಧಿಸಲಾಗಿದೆ. ಬೆಡ್ ಕೊಡಿಸುವ ಸೋಗಿನಲ್ಲಿ ಹಲವರಿಗೆ ಮೋಸ ಮಾಡಿರುವ ಸಾಧ್ಯತೆಯಿದೆ. ಇಬ್ಬರು ಆರೋಪಿಗಳ ಹಿಂದೆ ಅನ್ಯ ವ್ಯಕ್ತಿಗಳ ಕೈವಾಡ ಇರುವ ಶಂಕೆ ಹಿನ್ನೆಲೆ ಪ್ರಕರಣವನ್ನು ಸದ್ಯ ಸಿಸಿಬಿಗೆ ವರ್ಗಾಯಿಸಲಾಗಿದೆ. (ಬೆಡ್ ಬ್ಲಾಕಿಂಗ್ ದಂಧೆ: ಬೆಂಗಳೂರಲ್ಲಿ ಕೃತಕ ಅಭಾವ ಸೃಷ್ಟಿಸಿದ್ದ ಮಹಿಳೆ ಸೇರಿ ಇಬ್ಬರು ಅರೆಸ್ಟ್)