ಬೆಂಗಳೂರು: ನಗರದಲ್ಲಿ ಕೋಟ್ಯಂತರ ವೆಚ್ಚದ ರಸ್ತೆಗಳು ಕಾಮಗಾರಿಯ ಕಳಪೆ ಮಟ್ಟವನ್ನು ಎತ್ತಿ ತೋರಿಸುತ್ತಿವೆ. ಪ್ರತಿ ಡಾಂಬರು ರಸ್ತೆಗಳಲ್ಲಿ ಅನೇಕ ಗುಂಡಿಗಳಿವೆ. ರಸ್ತೆಗುಂಡಿಗೆ ಬಿದ್ದರೂ ಅಪಾಯ, ತಪ್ಪಿಸಲು ಹೋಗಿ ಅಡ್ಡಾದಿಡ್ಡಿ ವಾಹನ ಓಡಿಸಿದರೂ ಅಪಾಯ ಎನ್ನುವ ಪರಿಸ್ಥಿತಿಯಿದೆ.
ಇಷ್ಟಾದರೂ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ. ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ. ಕ್ರಮ ಕೈಗೊಳ್ಳುವ ವಿಚಾರ ಕೇವಲ ಹೇಳಿಕೆಗೆ ಸೀಮಿತವಾಗಿದ್ದು, ನಗರದ ಪ್ರಮುಖ ಪ್ರದೇಶ ಸೇರಿದಂತೆ ಹೊರವಲಯಗಳ ರಸ್ತೆಗಳಲ್ಲಿ ರಸ್ತೆಗಿಂತ ಗುಂಡಿಗಳೇ ಹೆಚ್ಚು ಕಾಣುತ್ತಿವೆ ಎನ್ನುವ ಅಸಮಾಧಾನದ ಮಾತುಗಳು ಕೇಳಿಬಂದಿದವೆ. ಅಷ್ಟೇ ಅಲ್ಲದೇ ಜಲ ಮಂಡಳಿಯ ಮ್ಯಾನ್ ಹೋಲ್ಗಳು ರಸ್ತೆ ಸಮನಾಂತರಕ್ಕೆ ಇರದೇ, ರಸ್ತೆಯ ಮೇಲೆ ಬಂದು ಅಥವಾ ರಸ್ತೆ ಸಮತಟ್ಟಿಗಿಂತ ಆಳದಲ್ಲಿದ್ದು, ವಾಹನಗಳು ಆಯತಪ್ಪಿ ಬೀಳುವ ಸ್ಥಿತಿಯಲ್ಲಿದೆ.
ಜನರ ಕಣ್ಣೊರೆಸಲು ಪಾಲಿಕೆ ಗುಂಡಿ ಮುಚ್ಚುವ ಪ್ರಯತ್ನ ನಡೆಸಿದರೂ, ಅವೈಜ್ಞಾನಿಕ ಕಾಮಗಾರಿಯಿಂದಾಗಿ ಮತ್ತೆ ಮತ್ತೆ ಕಿತ್ತು ಬರುತ್ತಿವೆ. ಮತ್ತೆ ಗುಂಡಿ ನಿರ್ಮಾಣವಾಗುತ್ತಿವೆ. ಮಳೆ ಬಂದಾಗ ಈ ಹೊಂಡಗಳಲ್ಲಿ ನೀರು ತುಂಬುವುದರಿಂದ ವಾಹನ ಸವಾರರು ತಿಳಿಯದೇ ಈ ಗುಂಡಿಗಳಿಂದಾಗಿ ಆಯತಪ್ಪಿ ಬೀಳುವ ಘಟನೆಗಳು, ಗಾಯಗೊಳ್ಳುವುದು ಸಾಮಾನ್ಯವಾಗಿವೆ. ಕಳೆದ ತಿಂಗಳು ರಸ್ತೆಗುಂಡಿಯಿಂದಲೇ ಮೂವರು ಸಾವನ್ನಪ್ಪಿದ್ದಾರೆ.
ಇನ್ನು ಬಿಬಿಎಂಪಿಯ ಈ ನಿರ್ಲಕ್ಷ್ಯ ಧೋರಣೆ ಖಂಡಿಸಿ, ಹಲವು ಸಂಘಟನೆಗಳು ಗುಂಡಿ ಪೂಜೆ ಹೆಸರಿನಲ್ಲಿ ಪ್ರತಿಭಟಿಸಿ, ಪಾಲಿಕೆ ವಿರುದ್ಧ ವ್ಯಂಗ್ಯವಾಡಿದರೂ ರಸ್ತೆ ಸರಿಪಡಿಸಲಾಗುತ್ತಿಲ್ಲ. ಮುಖ್ಯಮಂತ್ರಿಗಳು ನಗರ ಪ್ರದಕ್ಷಿಣೆ ನಡೆಸಿದರೂ ರಸ್ತೆಗುಂಡಿ ಬಗ್ಗೆ ಕ್ರಮ ಕೈಗೊಂಡಿಲ್ಲ. ಮಳೆ ನೆಪ ಹೇಳಿ ಪಾಲಿಕೆಯೂ ಜಾರಿಕೊಳ್ಳುತ್ತಿದೆ ಎಂದು ಆಪ್ ಆರೋಪಿಸಿದೆ.