ಬೆಂಗಳೂರು: ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ನ್ಯಾಯಾಲಯಗಳನ್ನು ಎರಡು ವಾರಗಳ ಕಾಲ ಮುಚ್ಚಲು ಆದೇಶಿಸಬೇಕು ಎಂದು ಒತ್ತಾಯಿಸಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದಾರೆ.
ಕೊರೊನಾ ಭೀತಿ: ಸುಪ್ರೀಂಕೋರ್ಟ್ ಸಿಜೆಐಗೆ ಪತ್ರ ಬರೆದ ಬೆಂಗಳೂರು ವಕೀಲರ ಸಂಘ
ಮಾಲ್, ಬಾರ್, ರೆಸ್ಟೋರೆಂಟ್ ಸೇರಿದಂತೆ ಎಲ್ಲದಕ್ಕೂ ಬ್ರೇಕ್ ಹಾಕಿರುವಂತೆ ಎರಡು ವಾರಗಳ ಕಾಲ ನ್ಯಾಯಾಲಯಗಳನ್ನು ಮುಚ್ಚುವಂತೆ ಆದೇಶ ಹೊರಡಿಸಬೇಕು ಎಂದು ಬೆಂಗಳೂರು ವಕೀಲರ ಸಂಘ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಮನವಿ ಸಲ್ಲಿಸಿದೆ.
ಮೂರು ಪುಟಗಳ ಪತ್ರದಲ್ಲಿ, ವಿಶ್ವದಲ್ಲೇ ಆರೋಗ್ಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಕರ್ನಾಟಕ ಸರ್ಕಾರ ಮಾಲ್, ಬಾರ್, ರೆಸ್ಟೋರೆಂಟ್, ಮದುವೆ ಹಾಲ್, ಚಿತ್ರಮಂದಿರಗಳನ್ನು ಮುಚ್ಚಲು ಆದೇಶಿಸಿದೆ. ಆದರೆ, ಪರಿಸ್ಥಿತಿ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ನ್ಯಾಯಾಲಯಗಳನ್ನು ಮುಚ್ಚುವುದು ಅನಿವಾರ್ಯವಾಗಿದ್ದು, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಮನವಿ ಮಾಡಿದೆ.
ವೈರಸ್ ನಿಯಂತ್ರಣಕ್ಕೆ ಹೈಕೋರ್ಟ್ ಸಹ ಅನೇಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ತುರ್ತು ಪ್ರಕರಣಗಳನ್ನು ಮಾತ್ರ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುತ್ತೋಲೆ ಹೊರಡಿಸಿದೆ. ಆದರೆ, ಹೈಕೋರ್ಟ್ ಹಾಗು ವಿಚಾರಣಾ ನ್ಯಾಯಾಲಯಗಳು ಸೇರಿದಂತೆ ಎಲ್ಲ ಕೋರ್ಟ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಸುಪ್ರೀಂಕೋರ್ಟ್‌ನಲ್ಲಿ ಕೆಲವೇ ನ್ಯಾಯಪೀಠಗಳು ಕಾರ್ಯ ನಿರ್ವಹಿಸುತ್ತಿದ್ದು, ಅದೇ ರೀತಿ ಕಾರ್ಯ ನಿರ್ವಹಿಸಲು ರಾಜ್ಯದ ನ್ಯಾಯಾಲಯಗಳಿಗೂ ಆದೇಶಿಸಬೇಕು ಎಂದು ಪತ್ರದಲ್ಲಿ ಕೋರಲಾಗಿದೆ.