ಬೆಂಗಳೂರು: ಸರ್ಕಾರದ ಸ್ಥಳೀಯ ಸಂಸ್ಥೆಗಳ ನಡುವೆಯೇ ಸಮನ್ವಯ ಕೊರತೆ ಇರುವುದು ಮತ್ತೆ ದೃಢಪಟ್ಟಿದೆ. ಬಡವರ ಹಸಿವು ನೀಗಿಸುವ ಉದ್ದೇಶದಿಂದ ಆರಂಭವಾದ ಇಂದಿರಾ ಕ್ಯಾಂಟೀನ್ಗಳಿಗೆ ನೀರು, ಒಳಚರಂಡಿ ವ್ಯವಸ್ಥೆಯನ್ನು ಜಲಮಂಡಳಿ ಸ್ಥಗಿತಗೊಳಿಸಿದೆ ಎಂದು ಗುತ್ತಿಗೆದಾರರು ಆರೋಪಿಸಿದ್ದಾರೆ.
ಈ ಬಗ್ಗೆ ಇಂದಿರಾ ಕ್ಯಾಂಟೀನ್ ಗುತ್ತಿಗೆ ವಹಿಸಿರುವ ಸಂಸ್ಥೆಗಳಲ್ಲಿ ಒಂದಾದ ಶೆಫ್ ಟಾಕ್ ಗುತ್ತಿಗೆ ಸಂಸ್ಥೆಯ ಮುಖ್ಯಸ್ಥ ಗೋವಿಂದ ಪೂಜಾರಿ ಮಾತನಾಡಿ ಬಹುತೇಕ 188 ಇಂದಿರಾ ಕ್ಯಾಂಟೀನ್ ಹಾಗೂ ಕಿಚನ್ಗಳಿಗೆ ನೀರು ಪೂರೈಕೆಯನ್ನು ಜಲ ಮಂಡಳಿ ಬಂದ್ ಮಾಡಿದೆ. ಅನಿವಾರ್ಯವಾಗಿ ಟ್ಯಾಂಕರ್ ನೀರು ಹಾಕಿಸುತ್ತಿದ್ದೇವೆ. ಒಳಚರಂಡಿ ಸಂಪರ್ಕವನ್ನು ಕಡಿತ ಮಾಡಿದ್ದು, ಆಹಾರದ ಗುಣಮಟ್ಟ ಕೆಡುವ ಸಾಧ್ಯತೆ ಇದೆ. ಈ ಬಗ್ಗೆ ಅನೇಕ ಸಭೆಗಳಲ್ಲಿ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದರು.