ಬೆಂಗಳೂರು:ಅಕ್ರಮ ಆಸ್ತಿ ಹಾಗೂ ತೆರಿಗೆ ವಂಚನೆ ಆರೋಪ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಪ್ತ ಸೇರಿದಂತೆ ಗುತ್ತಿಗೆದಾರರು ಹಾಗೂ ಲೆಕ್ಕ ಪರಿಶೋಧಕರ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ನಡೆಸಿದ ದಾಳಿ ಅಂತ್ಯಗೊಂಡಿದೆ.
ಬೆಂಗಳೂರಿನ ಉತ್ತರಹಳ್ಳಿ, ವಸಂತ ನಗರ, ಆರ್.ಟಿ.ನಗರ, ಸದಾಶಿವನಗರ, ಹೆಗಡೆ ನಗರ ಮುಂತಾದ ಕಡೆಗಳಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಕೆಲವೊಂದು ದಾಖಲೆಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.
ನೀರಾವರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಟೆಂಡರ್ ಗೋಲ್ಮಾಲ್ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಹಾಗೂ ತೆರಿಗೆ ವಂಚನೆ ಸಂಬಂಧ ಕೆಲವು ತಿಂಗಳ ಹಿಂದೆ ಅಕ್ರಮದ ಕುರಿತ ದೂರಿನನ್ವಯ ಅಧಿಕಾರಿಗಳು ಆಂತರಿಕ ತನಿಖೆ ನಡೆಸಿದ್ದರು. ನಿನ್ನೆ ದಾಳಿ ವೇಳೆ ಪತ್ತೆಯಾದ ಒಟ್ಟು ಆಸ್ತಿ ಮೌಲ್ಯದ ದಾಖಲೆಗಳನ್ನು ಸಂಗ್ರಹಿಸಲಾಗಿದೆ.
ಪತ್ತೆಯಾಗಿರುವ ಆಸ್ತಿ ಬಗ್ಗೆ ಸೂಕ್ತ ದಾಖಲೆ ಒದಗಿಸಲು ನೋಟಿಸ್ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಆದಾಯಕ್ಕೂ ಮೀರಿ ಆಸ್ತಿ ಪತ್ತೆಯಾದರೆ ವಿಚಾರಣೆಗೆ ಹಾಜರಾಗಲು ಐಟಿ ನೋಟಿಸ್ ನೀಡಲಿದೆ. ಒಂದು ವೇಳೆ, ಅಕ್ರಮದ ಸಾಕ್ಷ್ಯ ಸಿಕ್ಕರೆ, ಆಯಾ ವ್ಯಕ್ತಿಯನ್ನು ವಶಕ್ಕೆ ಪಡೆಯಲು ಸಾಧ್ಯತೆಯಿದೆ.