ಬೆಂಗಳೂರು: ಲಾಂಗ್ ತೋರಿಸಿ ಅಂಗಡಿಗಳಲ್ಲಿ ಹಣ ಸುಲಿಗೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೆ.ಜಿ.ಹಳ್ಳಿಯ ಬರ್ನಲ್ ಸಿದ್ದಿಕಿಯನ್ನು ಹೈಗ್ರೌಂಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬರ್ನಲ್ ಸಿದ್ದಿಕಿ ಆಗಾಗ ಲಾಂಗ್ ತೋರಿಸಿ ಏರಿಯಾಗಳಲ್ಲಿ ಭೀತಿ ಸೃಷ್ಟಿಸಿದ್ದ. ವಸಂತನಗರದ 8ನೇ ಕ್ರಾಸ್ನಲ್ಲಿ ರಸ್ತೆ ಬದಿಯ ಅಂಗಡಿಗಳಿಗೆ ನುಗ್ಗಿ ಲಾಂಗ್ ತೋರಿಸಿ ಹಣ ವಸೂಲಿ ಮಾಡುತ್ತಿದ್ದ. ಈತನ ಬೆದರಿಕೆಗೆ ಹೆದರಿ ಅಂಗಡಿ ಕೆಲಸಗಾರರು, ಮಾಲೀಕರು ಹಣ ನೀಡುತ್ತಿದ್ದರು. ಈ ಕುರಿತಾದ ಈತನ ಇತ್ತೀಚಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಕೇಂದ್ರ ವಿಭಾಗದ ಡಿಸಿಪಿ ಅನುಚೇತ್, ರೌಡಿಯೊಬ್ಬ ವಸಂತನಗರದ 8ನೇ ಕ್ರಾಸ್ ರಸ್ತೆಯಲ್ಲಿರುವ ಅಂಗಡಿಗೆ ನುಗ್ಗಿ ಲಾಂಗ್ ತೋರಿಸಿ ಸುಮಾರು 1000 ರೂ. ಕಿತ್ತುಕೊಂಡು ಹೋಗಿದ್ದ ಎಂದು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಸಿಸಿಟಿವಿ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ. ಈತ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದರು.