ಬೆಂಗಳೂರು :ಕಾಂಗ್ರೆಸ್ ಸಂಕಲ್ಪ ಸಮಾವೇಶದಲ್ಲಿ ಪಕ್ಷದ ಸಂಘಟನೆ ವಿಫಲವಾಗುತ್ತಿದೆ. ಆದಷ್ಟು ಬೇಗ ಅದನ್ನು ಸರಿಪಡಿಸಿಕೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಬೆಂಗಳೂರಿನ ಮೈಸೂರು ರಸ್ತೆ ಪೂರ್ಣಿಮಾ ಪ್ಯಾಲೇಸ್ನಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ವಿಭಾಗ ಮಟ್ಟದ ನಾನಾ ಜಿಲ್ಲೆಗಳ ಕಾಂಗ್ರೆಸ್ ಸ್ಥಳೀಯ ಮುಖಂಡರ ಜತೆ ಸಮಾಲೋಚನೆ ಮತ್ತು ಸಂಕಲ್ಪ ಸಮಾವೇಶದಲ್ಲಿ ಮುಖಂಡರಿಂದ ಈ ಅಭಿಪ್ರಾಯ ವ್ಯಕ್ತವಾಗಿದ್ದು, ಪಕ್ಷದ ರಾಜ್ಯ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ ಎಂಬ ಭರವಸೆ ನೀಡಿದ್ದಾರೆ.
ಚುನಾವಣೆ ಬಂದಾಗ ಮಾತ್ರ ವಿಶೇಷ ಕಾಳಜಿ :ಸಭೆಯಲ್ಲಿ ಮಾತನಾಡಿದ ಹಲವು ಮುಖಂಡರು, ಸಂಘಟನೆ ವಿಚಾರದಲ್ಲಿ ನಾವುಗಳೇ ವಿಫಲರಾಗುತ್ತಿದ್ದೇವೆ. ಪಕ್ಷದ ಸಂಘಟನೆ ವಿಚಾರದಲ್ಲಿ ನಾವು, ಪದಾಧಿಕಾರಿಗಳು, ಜಿಲ್ಲಾ ಸಂಘಟಕರು ವಿಫಲರಾಗಿದ್ದಾರೆ. ಜಿಲ್ಲೆಯಲ್ಲಿ ಇರುವ ಮುಖಂಡರುಗಳು ಚುನಾವಣೆ ಬಂದ್ರೆ ಮಾತ್ರ ವಿಶೇಷ ಕಾಳಜಿ ತೋರಿಸಿ ಕಾರ್ಯನಿರ್ವಹಿಸುತ್ತಾರೆ.
ಉಳಿದಂತೆ ಎಲ್ಲಿ ಇರುತ್ತಾರೆ ಎಂದು ಗೊತ್ತಾಗಲ್ಲ, ಸಮಸ್ಯೆಗಳು ಬಂದಾಗ ಬೇರೆ ಪಕ್ಷದವರು ಬಂದು ಸಮಸ್ಯೆ ಪರಿಹಾರ ಮಾಡುತ್ತಾರೆ. ನಾವು ಜನರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ಜೊತೆಗೆ ಕಾಂಗ್ರೆಸ್ ಈವರೆಗೂ ಮಾಡಿರುವ ಕೆಲಸಗಳನ್ನು ಧೈರ್ಯವಾಗಿ ಹೇಳಲು ಹೆದರುತ್ತಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.