ಬೆಂಗಳೂರು:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ತನ್ನ ಸ್ವತ್ತನ್ನು ಮರು ವಶಪಡಿಸಿಕೊಳ್ಳುತ್ತಿದ್ದು, ಕಳೆದ ಮೂರು ದಿನಗಳಲ್ಲಿ ಎರಡು ಪ್ರಮುಖ ಬಡಾವಣೆಗಳಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ.
ರಾಜಾಜಿನಗರ 6ನೇ ಹಂತದಲ್ಲಿ ಪ್ರಸನ್ನ ಚಿತ್ರಮಂದಿರದ ಬಳಿ 2 ಎಕರೆ 20 ಗುಂಟೆ ಬಿಡಿಎ ಜಾಗದಲ್ಲಿ ಅತಿಕ್ರಮವಾಗಿ 5 ತಾತ್ಕಾಲಿಕ ಶೆಡ್ಗಳು ಮತ್ತು 1 ಗ್ಯಾರೇಜ್ ನಿರ್ಮಾಣ ಮಾಡಲಾಗಿತ್ತು. ಹಲವು ಬಾರಿ ನೋಟೀಸ್ ನೀಡಿದ್ದರೂ ತೆರವು ಮಾಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ನೇತೃತ್ವದಲ್ಲಿ ಬಿಡಿಎ ಪೊಲೀಸ್ ವರಿಷ್ಠಾಧಿಕಾರಿಗಳಾದ ಭಾಸ್ಕರ್ ಮತ್ತು ರವಿಕುಮಾರ್ ಸಮ್ಮುಖದಲ್ಲಿ ಐದಕ್ಕೂ ಹೆಚ್ಚು ಜೆಸಿಬಿಗಳು ಮತ್ತು 50 ಸಿಬ್ಬಂದಿಯಿಂದ ಅತಿಕ್ರಮವಾಗಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್ಗಳು ಮತ್ತು ಗ್ಯಾರೇಜ್ ತೆರವುಗೊಳಿಸಲಾಯಿತು. ಈ ಜಾಗದ ಅಂದಾಜು ಮೌಲ್ಯ 175 ಕೋಟಿ ರೂಪಾಯಿ ಎಂದು ಹೇಳಲಾಗಿದೆ.
ವಿಜಯನಗರ ಅತ್ತಿಗುಪ್ಪೆಯ ಕೆಂಪಾಪುರ ಅಗ್ರಹಾರದಲ್ಲಿ ಬಿಡಿಎಗೆ ಸೇರಿದ ಸರ್ವೇ ನಂಬರ್ 329/3 ರಲ್ಲಿ ಅತಿಕ್ರಮವಾಗಿ ನಿರ್ಮಾಣವಾಗಿದ್ದ ಪೆಟ್ರೋಲ್ ಬಂಕ್ ಮತ್ತು ಖಾಲಿ ಜಾಗ ಸೇರಿ ಒಟ್ಟು 1 ಎಕರೆ 9 ಗುಂಟೆ ಜಾಗವನ್ನು ಬಿಡಿಎ ಮರಳಿ ವಶಕ್ಕೆ ಪಡೆದಿದೆ.
ಈ ಹಿಂದೆ ಖಾಸಗಿ ವ್ಯಕ್ತಿಯೊಬ್ಬರು ಜಾಗ ತಮ್ಮದು ಎಂದು ಹೈಕೋರ್ಟ್ನಲ್ಲಿ ದಾವೆ ಸಲ್ಲಿಸಿದ್ದರು. ನ್ಯಾಯಾಲಯ ಇವರ ಪರವಾಗಿ ತೀರ್ಪು ನೀಡಿತ್ತು. ಬಳಿಕ ತೀರ್ಪನ್ನು ಪ್ರಶ್ನಿಸಿ ಬಿಡಿಎ ಮೇಲ್ಮನವಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆದು ಇದೀಗ ಬಿಡಿಎ ಪರ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಬಿಡಿಎ ಅಧಿಕಾರಿಗಳು ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಜಾಗದ ಅಂದಾಜು ಮೌಲ್ಯ 125 ಕೋಟಿ ರೂಪಾಯಿಗಳಾಗಿದೆ.
ಕಾರ್ಯಾಚರಣೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, 'ನೂರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪತ್ತೆ ಮಾಡಿ ವಶಪಡಿಸಿಕೊಳ್ಳುವಲ್ಲಿ ನಮ್ಮ ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶ್ರಮ ಹಾಕಿದ್ದಾರೆ. ಬಿಡಿಎ ಆಸ್ತಿಯೆಂದರೆ ಅದು ಸಾರ್ವಜನಿಕರ ಆಸ್ತಿಯಾಗಿರುತ್ತದೆ. ಈ ಆಸ್ತಿಯನ್ನು ಉಳಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡುವುದು ನಮ್ಮ ಕರ್ತವ್ಯ' ಎಂದರು.
ಇದನ್ನೂ ಓದಿ:ಟ್ವಿಟರ್ನಲ್ಲಿ ಮೈಸೂರು ವಿದ್ಯಾರ್ಥಿನಿ ಫಾಲೋ ಮಾಡಿದ ಪ್ರಧಾನಿ ನರೇಂದ್ರ ಮೋದಿ