ಬೆಂಗಳೂರು:ಎಸಿಬಿ ಅಧಿಕಾರಿಗಳಿಂದ ಬಂಧಿತರಾಗಿರುವ IAS ಅಧಿಕಾರಿ ಜೆ.ಮಂಜುನಾಥ್ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಸಿಸಿಎಚ್ 24 ರ ವಿಶೇಷ ಎಸಿಬಿ ನ್ಯಾಯಾಲಯದ ನ್ಯಾಯಾಧೀಶ ಲಕ್ಷ್ಮಿ ನಾರಾಯಣ ಭಟ್ ಆದೇಶಿಸಿದ್ದಾರೆ. ನ್ಯಾಯಾಲಯದ ಆದೇಶದನ್ವಯ ಅಧಿಕಾರಿಯನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಲಾಗಿದೆ.
ಆನೇಕಲ್ ತಾಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನಿನ ವ್ಯಾಜ್ಯದಲ್ಲಿ ಆಜಂ ಪಾಶಾ ಎಂಬುವವರ ಪರವಾಗಿ ಆದೇಶ ನೀಡಲು 5 ಲಕ್ಷ ರೂಪಾಯಿ ಲಂಚ ಪಡೆದ ಗಂಭೀರ ಆರೋಪ ಮಂಜುನಾಥ್ ಮೇಲಿದೆ. ಮೇ 21ರಂದು ಜಿಲ್ಲಾಧಿಕಾರಿ ಕಚೇರಿ ಮೇಲೆ ದಾಳಿ ನಡೆಸಿದ್ದ ಎಸಿಬಿ ಅಧಿಕಾರಿಗಳು 5 ಲಕ್ಷ ಲಂಚ ಸ್ವೀಕರಿಸುತ್ತಿದ್ದ ತಹಶೀಲ್ದಾರ್ ಮಹೇಶ್ ಹಾಗೂ ಗುತ್ತಿಗೆ ನೌಕರ ಚೇತನ್‌ನನ್ನು ಬಂಧಿಸಿದ್ದರು.