ಬೆಂಗಳೂರು: ರಾಜ್ಯದಲ್ಲಿ ಸೆಮಿ ಲಾಕ್ಡೌನ್ ಜಾರಿಯಾಗಿ ಐದು ದಿನಗಳು ಕಳೆದಿವೆ. ಜನರ ಓಡಾಟಕ್ಕೆ ಬ್ರೇಕ್ ಬಿದ್ದಿದ್ದು, ಕೋವಿಡ್ ಸೋಂಕು ಹರಡುವಿಕೆ ಹಾಗೂ ಸಾವಿನ ಪ್ರಮಾಣದಲ್ಲೂ ಗಣನೀಯ ಇಳಿಕೆಯಾಗಿದೆ.
ನಗರದಲ್ಲಿ ಇಂದು 13,402 ಜನರಲ್ಲಿ ಪಾಸಿಟಿವ್ ದೃಢಪಟ್ಟಿದ್ದು, 94 ಮಂದಿ ಮೃತಪಟ್ಟಿದ್ದಾರೆ. ಕಳೆದ ಎರಡು ವಾರದಿಂದ ನೂರು, ಇನ್ನೂರಕ್ಕಿಂತ ಹೆಚ್ಚು ಕೊರೊನಾ ರೋಗಿಗಳು ಮೃತಪಡುತ್ತಿದ್ದರು. ಸದ್ಯ ಸೋಂಕಿತರು ಕಡಿಮೆ ಆಗಿರುವ ಹಿನ್ನೆಲೆ, ಆಮ್ಲಜನಕದ ಲಭ್ಯತೆಯೂ ಹೆಚ್ಚಾಗಿರುವುದರಿಂದ ಮರಣ ಪ್ರಮಾಣದಲ್ಲಿ ಕಡಿಮೆ ಆಗಿದೆ. ಸೆಮಿ ಲಾಕ್ಡೌನ್ಗೆ ಮೊದಲು 20, 25 ಸಾವಿರ ಮೇಲ್ಪಟ್ಟು ಬರುತ್ತಿದ್ದ ಕೊರೊನಾ ಪ್ರಕರಣ ಕೂಡಾ 13 ಸಾವಿರಕ್ಕೆ ಇಳಿಕೆಯಾಗಿದೆ. ಇಂದು 7,379 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಹಾಗೂ ಚೇತರಿಸಿಕೊಂಡಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 10,42714 ಕ್ಕೆ ಏರಿಕೆಯಾಗಿದ್ದು, ಸಾವಿನ ಪ್ರಮಾಣ 9340ಕ್ಕೆ ಏರಿದೆ.
ಮುಖ್ಯ ಆಯುಕ್ತ ಗೌರವ್ ಗುಪ್ತಾ
ಲಾಕ್ಡೌನ್ನಿಂದ ಸೋಂಕಿನ ಪ್ರಮಾಣ ಇಳಿಕೆಯಾಗಿದೆ:
ಕಡಿಮೆ ಟೆಸ್ಟ್ ಮಾಡುತ್ತಿರುವುದರಿಂದ ಕೋವಿಡ್ ಸೋಂಕು ಕಡಿಮೆ ದಾಖಲಾಗ್ತಿದೆಯೇ ಎಂಬ ಗೊಂದಲಕ್ಕೆ ತೆರೆ ಎಳೆದ ಮುಖ್ಯ ಆಯುಕ್ತ ಗೌರವ್ ಗುಪ್ತಾ, ಕೋವಿಡ್ ಟೆಸ್ಟಿಂಗ್ ಕಡಿಮೆ ಮಾಡಿಲ್ಲ, ಲಾಕ್ಡೌನ್ನಿಂದ ಹತೋಟಿಗೆ ಬರುತ್ತಿದೆ ಎಂದರು.
(ರಾಜ್ಯದಲ್ಲಿಂದು 41,664 ಮಂದಿಗೆ ಸೋಂಕು: 6 ಲಕ್ಷ ದಾಟಿದ ಸಕ್ರಿಯ ಪ್ರಕರಣಗಳು)
ಕೊರೊನಾ ಸೋಂಕು ಪರೀಕ್ಷೆ ಪ್ರಮಾಣ ಕಡಿಮೆ ಮಾಡಿರುವ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಸಾಮಾನ್ಯ ದಿನಗಳಲ್ಲಿ ಬಸ್ ನಿಲ್ದಾಣ, ರೈಲು ಮತ್ತು ಮೆಟ್ರೋ ನಿಲ್ದಾಣ, ಮಾರುಕಟ್ಟೆಗಳು ಹಾಗೂ ಕಲ್ಯಾಣ ಮಂಟಪ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ ರ‌್ಯಾಂಡಮ್ ಕೋವಿಡ್ ಪರೀಕ್ಷೆ ಮಾಡಲಾಗುತ್ತಿತ್ತು. ಇದರಿಂದ 80 ಸಾವಿರಕ್ಕೂ ಅಧಿಕ ಕೋವಿಡ್ ಪರೀಕ್ಷೆ ಮಾಡಿರುವುದು ವರದಿ ಆಗುತ್ತಿತ್ತು. ಈಗ ಕೇವಲ ಸೋಂಕು ಲಕ್ಷಣ ಇರುವವರು, ಸೋಂಕಿತರ ಸಂಪರ್ಕಕ್ಕೆ ಬಂದವರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೇರವಾಗಿ ಬಂದು ಕೋವಿಡ್ ಪರೀಕ್ಷೆಗೆ ಒಳಗಾಗುವವರ ಸಂಖ್ಯೆ ಮಾತ್ರ ದಾಖಲಾಗುತ್ತಿದೆ.
ಕೊರೊನಾ ಸೋಂಕು ಸರಪಳಿ ಕಡಿತ ಮಾಡಲು ಮನೆಯಲ್ಲೇ ಇರಬೇಕು. ನಿಯಮ ಪಾಲನೆಯ ಮೂಲಕ ಸೋಂಕು ಹಬ್ಬುವುದಕ್ಕೆ ಕಡಿವಾಣ ಹಾಕಬಹುದು. ನಗರದಲ್ಲಿ ಕೊರೊನಾ ಸೋಂಕಿತರನ್ನು ಆಸ್ಪತ್ರೆ, ಆರೈಕೆ ಕೇಂದ್ರಕ್ಕೆ ಸಾಗಿಸುವ ಆ್ಯಂಬುಲೆನ್ಸ್ ಹಾಗೂ ಕೋವಿಡ್ ಮೃತರ ಶವ ಸಾಗಣೆ ಮಾಡುವ ಶ್ರದ್ಧಾಂಜಲಿ ವಾಹನಗಳ ಚಾಲಕರಿಗೂ ಸೋಂಕು ಹರಡುವ ಆತಂಕವಿದೆ. ಹೀಗಾಗಿ, ಆ್ಯಂಬುಲೆನ್ಸ್ ಚಾಲರಿಗೆ ಆಯಾ ಏಜೆನ್ಸಿಗಳು ಕಡ್ಡಾಯವಾಗಿ ಪಿಪಿಇ ಕಿಟ್ ನೀಡುವಂತೆ ಸೂಚಿಸಲಾಗಿದೆ. ಆ್ಯಂಬುಲೆನ್ಸ್ ಮತ್ತು ಶ್ರದ್ಧಾಂಜಲಿ ವಾಹನ ಚಾಲಕರು ಕಡ್ಡಾಯ ಪಿಪಿಇ ಕಿಟ್, ಮಾಸ್ಕ್ ಹಾಗೂ ಗ್ಲೌಸ್ ಧರಿಸಬೇಕು ಎಂದರು.