ಬೆಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಕಾರ್ಯಕರ್ತರು ಸರ್ಕಾರದ ವಿರುದ್ಧವೇ ಸಿಡಿಮಿಡಿಗೊಂಡಿದ್ದಾರೆ. ಈ ನಿಟ್ಟಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನಿವಾಸಕ್ಕಿಂದು ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಗುಪ್ತಚರ ಇಲಾಖೆಯ ವೈಫಲ್ಯವನ್ನ ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ತಮ್ಮ ಕಚೇರಿಯಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂತಹ ಘಟನೆ ಒಪ್ಪಿಕೊಳ್ಳುವಂತ ವಿಚಾರ ಅಲ್ಲ. ಈ ಬಗ್ಗೆ ಮೊದಲೇ ನಮ್ಮವರು ಮುನ್ಸೂಚನೆ ಅರಿತುಕೊಳ್ಳಬೇಕಿತ್ತು. ಅದು ನಮ್ಮಿಂದ ಆಗಿಲ್ಲ. ಈ ಬಗ್ಗೆ ಪರಶೀಲಿಸುತ್ತೇವೆ. ನಮ್ಮ ಡಿಸಿಪಿ, ಹೆಚ್ಚುವರಿ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿರ್ಲಕ್ಷ್ಯ ವಹಿಸಿದ್ದು, ಕಂಡುಬಂದ್ರೆ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಆಯುಕ್ತರು ತಿಳಿಸಿದ್ದಾರೆ.
ಗೃಹ ಸಚಿವರಿಗೆ ಮನವಿ ಪತ್ರ ಕೊಟ್ಟು, ಮೌನ ಪ್ರತಿಭಟನ ಮಾಡುತ್ತಾರೆ ಎನ್ನುವ ಮಾಹಿತಿ ನಮಗೆ ಬೆ.10 ಗಂಟೆಗೆ ಗೊತ್ತಾಗಿತ್ತು. ಸ್ಥಳದಲ್ಲಿ ಹೋಮ್ ಗಾರ್ಡ್ಸ್ ಇದ್ದರು. ಮೊದಲು ಮೌನವಾಗಿ ಪ್ರತಿಭಟನೆ ಮಾಡಿದ್ದಾರೆ. ಆಗ ಅಲ್ಲಿದ್ದ ಸಿಬ್ಬಂದಿ ಗೇಟ್ ಮುಚ್ಚಿದ್ದಾರೆ. ಈ ವೇಳೆ ಗೇಟ್ ತಳ್ಳಿಕೊಂಡು ಒಳ ನುಗ್ಗಲು ಪ್ರಯತ್ನಿಸಿದ್ದಾರೆ. ನಮ್ಮ ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ವಿಚಾರವಾಗಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಮಿಷನರ್ ಪ್ರತಿಕ್ರಿಯಿಸಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಹಾಗೂ ಕಠಿಣ ಕ್ರಮ ಕೈಗೊಳ್ಳದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಸುಮಾರು 50 ಕಾರ್ಯಕರ್ತರು ಗೃಹ ಸಚಿವರ ನಿವಾಸದ ಗೇಟ್ ತಳ್ಳಿ ಇಂದು ಬೆಳಗ್ಗೆ ಒಳನುಗ್ಗಿ ಮುತ್ತಿಗೆ ಹಾಕಿದ್ದರು. ಬಳಿಕ ಸಚಿವರ ರಾಜೀನಾಮೆಗೆ ಆಗ್ರಹಿಸಿ ನಿವಾಸದ ಮುಂದೆ ಧರಣಿ ನಡೆಸಿದರು. ಈ ವೇಳೆ, ಗೃಹ ಸಚಿವರು ನಿವಾಸದಲ್ಲಿ ಇರಲಿಲ್ಲ. ಆಗ ಪೊಲೀಸರು ಹಾಗೂ ಕಾರ್ಯಕರ್ತರ ನಡುವೆ ವಾಕ್ಸಮರ ನಡೆಯಿತು.
ಓದಿ: ಪ್ರವೀಣ್ ಹತ್ಯೆ ಖಂಡಿಸಿ ಗೃಹ ಸಚಿವರ ನಿವಾಸಕ್ಕೆ ಎಬಿವಿಪಿ ಮುತ್ತಿಗೆ, ಲಘು ಲಾಠಿ ಚಾರ್ಜ್