ಬೆಂಗಳೂರು:ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ)ಪ್ರಮಾಣ ಪತ್ರದಲ್ಲಿನ ತಪ್ಪು ತಿದ್ದಲು 3 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತೆಯನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಅಧಿಕಾರಿಗಳು ಬಂಧಿಸಿದ್ದಾರೆ. ಇಂದಿರಾ ನಗರ ವಾಣಿಜ್ಯ ತೆರಿಗೆ ಇಲಾಖೆ ಕಚೇರಿಯ ಸಹಾಯಕ ಆಯುಕ್ತೆ ಜಿ.ಸಿ. ಪ್ರಿಯಾಂಕಾ ಬಂಧಿತ ಆರೋಪಿ.
ಮಂಜುನಾಥ ನಗರದ ಕಲ್ಕೆರೆಯ ಎಲೆಕ್ಟಿಕಲ್ ಮತ್ತು ಹಾರ್ಡ್‌ವೇರ್ ಉದ್ಯಮಿಯೊಬ್ಬರು ತನ್ನ ಇಲೆಕ್ಟ್ರಿಕ್ ಅಂಗಡಿಗೆ ಜಿಎಸ್‌ಟಿ ಪ್ರಮಾಣ ಪತ್ರಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಪಿನ್ ಕೋಡ್ ತಪ್ಪಾದ ಕಾರಣ ಪರಿಷ್ಕೃತ ಮನವಿ ಸಲ್ಲಿಸಿದ್ದರು. ಅರ್ಜಿಯಲ್ಲಿನ ತಪ್ಪು ಸರಿಪಡಿಸಿ, ಪ್ರಮಾಣಪತ್ರ ನೀಡಲು ವಾಣಿಜ್ಯ ಆಯುಕ್ತೆ ಪ್ರಿಯಾಂಕಾ 10 ಸಾವಿರ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು. ಚೌಕಾಸಿ ಮಾಡಿದಾಗ 3 ಸಾವಿರ ರೂ. ನೀಡಿದರೆ ಪ್ರಮಾಣಪತ್ರ ಕೊಡುವುದಾಗಿ ತಿಳಿಸಿದ್ದರು ಎನ್ನಲಾಗ್ತಿದೆ.