ಬೆಂಗಳೂರು:ಮಲ್ಲೇಶ್ವರಂ ಠಾಣೆ ಪೊಲೀಸರು ಕಾರ್ಯಾಚರಣೆ ನೆಡಸಿ ಸರಗಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇಬ್ರಾಹಿಂ ಪಾಷ (32) ಹಾಗೂ ಅಜರ್ ಪಾಷ (29) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 223 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಮಲ್ಲೇಶ್ವರಂ ಬಳಿ ಗುರುವಾರ ರಾತ್ರಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಗಳನ್ನು ಬಂಧಿಸಿ ವಿಚಾರಿಸಿದಾಗ ಸುಮಾರು 16 ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿದೆ. ಸರಗಳವು, ರಾಬರಿ ಡಕಾಯಿತಿಯಲ್ಲಿ ಭಾಗಿಯಾಗಿದ್ದ ಆರೋಪಿಗಳು ಕಳೆದ ಮಾರ್ಚ್ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು. ಇವರಿಬ್ಬರೂ ಜೈಲಿನಲ್ಲಿ ಪರಸ್ಪರ ಪರಿಚಯಸ್ಥರಾಗಿದ್ದರು. ಹೊರಬಂದ ನಂತರ ಜೊತೆಯಾಗಿ ಬೆಳಗ್ಗೆ 5 ರಿಂದ 6:30 ರ ಸಮಯದಲ್ಲಿ ಸರಗಳವು ಮಾಡುತ್ತಿದ್ದರು ಸರಗಳವು ಮಾಡುವ ಹಿಂದಿನ ದಿನ ಬೈಕ್ ಕಳವು ಮಾಡಿ ಕೃತ್ಯಕ್ಕೆ ಬಳಕೆ ಮಾಡಿದ್ದಾರೆ.
ದಂಗುಬಡಿಸುವ ಕಂಪ್ಲೀಟ್ ಹಿಸ್ಟರಿ: ಡಿಸಿಪಿ ಹೇಳುವಂತೆ..
ಜೂನ್ 2 ರಂದು ಬೆಳಗ್ಗೆ ಸುಮಾರು 6 ಗಂಟೆ ಸಮಯದಲ್ಲಿ ಬೆಂಗಳೂರು ಉತ್ತರ ವಿಭಾಗದ ಸುಬ್ರಮಣ್ಯ ನಗರ ಪೊಲೀಸರು ಠಾಣಾ ವ್ಯಾಪ್ತಿಯ 15 ನೇ ಬ್ಲಾಕ್‌ನಲ್ಲಿ ಮತ್ತು ಜೂನ್ 4 ರಂದು ಬೆಳಿಗ್ಗೆ ಸುಮಾರು 6.30 ರ ಸಮಯದಲ್ಲಿ ರಾಜಗೋಪಾಲನಗರದ ಕೈಗಾರಿಕಾ ಪ್ರದೇಶದ 8ನೇ ಕ್ರಾಸ್ ನಲ್ಲಿ ಸರಗಳ್ಳತನ ಪ್ರಕರಣ ವರದಿಯಾಗಿದ್ದು, ಈ ಪ್ರಕರಣಗಳಲ್ಲಿ ದೊರೆತ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆದುಕೊಂಡು ಆರೋಪಿಗಳ ಪತ್ತೆಗಾಗಿ ಮಲ್ಲೇಶ್ವರಂ ಉಪ ವಿಭಾಗದಲ್ಲಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ಅಲರ್ಟ್ ಮಾಡಿ ವಿಶೇಷ ಮುಂಜಾನೆ ಗಸ್ತು ವ್ಯವಸ್ಥೆ ಮಾಡಲಾಗಿತ್ತು.
ಮಲ್ಲೇಶ್ವರಂ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಪಿ.ರೇಣುಕಾ, ಗೀತಾ ತಟ್ಟಿ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಿ ಅದರಲ್ಲಿ ದೊರೆತ ಆರೋಪಿಗಳ ಚಹರೆ ಆಧಾರದ ಮೇಲೆ ತನಿಖೆ ಕೈಗೊಂಡಿದ್ದರು. ಅದರಂತೆ ನಿನ್ನೆ ಬೆಳಗ್ಗೆ ಸುಮಾರು 7.30ರ ಸಮಯದಲ್ಲಿ ಮಲ್ಲೇಶ್ವರಂ 8ನೇ ಮುಖ್ಯರಸ್ತೆಯ 7ನೇ ಕ್ರಾಸಿನಲ್ಲಿ ಗಸ್ತಿನಲ್ಲಿದ್ದಾಗ ಇಬ್ಬರು ಆರೋಪಿಗಳು ಸುಜುಕಿ ಆಕ್ಸಿಸ್ ದ್ವಿಚಕ್ರವಾಹನದಲ್ಲಿ ಬರುತ್ತಿರುವಾಗ ಪೊಲೀಸರನ್ನು ಕಂಡು ಗಾಡಿ ತಿರುಗಿಸಿಕೊಂಡು ಹೋಗಲು ಪ್ರಯತ್ನಿಸಿದಾಗ ಪೊಲೀಸರು ಆರೋಪಿಗಳನ್ನು ಬೆನ್ನಟ್ಟಿ ಹಿಡಿದು ತಮ್ಮ ವಶಕ್ಕೆ ಪಡೆದುಕೊಂಡು ಪೊಲೀಸ್ ಠಾಣೆಗೆ ತಂದು ವಿಚಾರಣೆ ಮಾಡಿದ್ದಾರೆ.
ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕಳವು ಮಾಡಲು ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಹೀಗಾಗಿ ಆರೋಪಿಗಳಾದ ಪಾದರಾಯನಪುರದ ಗೋರಿಪಾಳ್ಯದ ಇಬ್ರಾಹಿಂ ಪಾಷ ಅಲಿಯಾಸ್ ಕಾಲೂ (32), ಶಿವಾಜಿನಗರದ ಬ್ರಾಡ್ ವೇ ರಸ್ತೆಯ ಅಜರ್ ಪಾಷ ಅಲಿಯಾಸ್ ಅಜರ್ (20) ಎನ್ನುವವರನ್ನು ವಿಚಾರಣೆ ಮಾಡಿ ಆರೋಪಿಗಳು, ನೀಡಿದ ಮಾಹಿತಿ ಮೇರೆಗೆ ಸುಮಾರು 12.5 ಲಕ್ಷ ರೂ ಬೆಲೆ ಬಾಳುವ 223 ಗ್ರಾಂ ಚಿನ್ನಾಭರಣ ಮತ್ತು 3 ದ್ವಿಚಕವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಮಲ್ಲೇಶ್ವರಂ ಪೊಲೀಸರು ಯಶಸ್ವಿಯಾಗಿದ್ದಾರೆ.