ಬೆಂಗಳೂರು:ಬಿಬಿಎಂಪಿ ಹೇಳೋದು ಒಂದು ಮಾಡೋದು ಮತ್ತೊಂದು. ಒಂದೇ ದಿನಕ್ಕೆ ಕಸ್ತೂರಿ ನಗರದ ಬಹುಮಹಡಿ ಕಟ್ಟಡದ ನೆಲಸಮ ಮಾಡುವುದಾಗಿ ಹೇಳಿತ್ತು. ಆದರೆ ತೆರವು ಕಾರ್ಯಾಚರಣೆ ಮಾಡಲು ಹರಸಾಹಸ ಪಡ್ತಾ ಇದೆ. ಇತ್ತ ಅಳೆದುಳಿದ ಕಟ್ಟಡದ ಮಧ್ಯೆ ವಸ್ತುಗಳನ್ನ ಹುಡುಕುತ್ತಾ ನಿವಾಸಿಗಳು ಕಣ್ಣೀರು ಹಾಕ್ತಾ ಇದ್ದಾರೆ.
ಬೆಂಗಳೂರಲ್ಲಿ ಕಳೆದ ಹತ್ತು ದಿನಗಳಿಂದ ಕಟ್ಟಡ ಕುಸಿತದ ಪ್ರಕರಣ ಒಂದಾದ ನಂತರ ಒಂದು ಆಗುತ್ತಿದೆ. ಗುರುವಾರ ಕೂಡ ಕಸ್ತೂರಿನಗರ ಡಾಕ್ಟರ್ಸ್ ಲೇ ಔಟ್ ನಲ್ಲಿ ಮೂರು ಅಂತಸ್ತಿನ ಬಹುಮಹಡಿ ಕಟ್ಟಡ ಕುಸಿದಿದೆ. ಒಂದೇ ದಿನದಲ್ಲಿ ತೆರವು ಕಾರ್ಯಾಚರಣೆ ಮಾಡೋದಾಗಿ ಬಿಬಿಎಂಪಿ ಹೇಳಿತ್ತು. ಆದರೆ ಶುಕ್ರವಾರ ಅಗ್ನಿಶಾಮಕ ದಳ, ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆ ತೆರವು ಕಾರ್ಯಾಚರಣೆ ಮಾಡಲು ಹರಸಾಹಸಪಟ್ಟರೂ ಯಶಸ್ವಿಯಾಗಿಲ್ಲ.
ಈ ಕಟ್ಟಡ ಕುಸಿತದಿಂದಾಗಿ ಅಕ್ಕಪಕ್ಕದ ಮನೆಗಳು ಮತ್ತು ಅಪಾರ್ಟ್ಮೆಂಟ್ಗಳ ನಿವಾಸಿಗಳು ಈಗ ಲಾಡ್ಜ್ಗಳಲ್ಲಿ ನೆಲೆಸಿದ್ದಾರೆ. ಆದರೆ ಇನ್ನೂ ತೆರೆವು ಕಾರ್ಯಾಚರಣೆ ಸಂಪೂರ್ಣವಾಗಿ ಮಾಡಲು ನಾಲ್ಕೈದು ದಿನಗಳು ಬೇಕಾಗಬಹುದು ಎಂದು ಹೇಳಲಾಗುತ್ತಿದೆ.
ನಿವಾಸಿಗಳ ಅಳಲು:
ಕುಸಿತವಾದ ಕಟ್ಟಡದಲ್ಲಿ ಮೂರು ಕುಟುಂಬಗಳು ವಾಸವಾಗಿದ್ದವು. ಕಟ್ಟಡ ಕುಸಿಯುತ್ತಿದ್ದಂತೆ ಮನೆಯಿಂದ ಜೀವ ಉಳಿಸಿಕೊಳ್ಳಲು ಎಲ್ಲ ವಸ್ತುಗಳನ್ನ ಮನೆಯಲ್ಲಿಯೇ ಬಿಟ್ಟು ಓಡಿ ಬಂದಿದ್ರು. ಬೆಳಗ್ಗೆ ತೆರವು ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಕಟ್ಟಡದ ಅವಶೇಷಗಳಲ್ಲಿ ಸಿಲುಕಿರುವ ಪರ್ಸ್, ಬಟ್ಟೆ, ಬ್ಯಾಗ್, ಚಿನ್ನದ ಒಡವೆ ಮತ್ತು ವಸ್ತುಗಳನ್ನ ಹುಡುಕಲು ಪರದಾಡಿದರು. ಈ ವೇಳೆ ಮಾತನಾಡಿದ ಬಾಡಿಗೆದಾರರು, ಇಷ್ಟು ದಿನ ದುಡಿದಿದ್ದೆಲ್ಲ ನೀರುಪಾಲಾಗಿದೆ. ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಕಟ್ಟಡದ ಗೋಡೆ ಮೇಲೆ ಬಿರುಕು ಬಿದ್ದಿತ್ತು. ತಕ್ಷಣ ಸೆಕ್ಯೂರಿಟಿ ಗಾರ್ಡ್ ನಮಗೆ ವಿಚಾರ ತಿಳಿಸಿದರು. ಬಿರುಕು ದೊಡ್ಡದಾಗುತ್ತಿದ್ದಂತೆ ಕಟ್ಟಡ ವಾಲೋದಕ್ಕೆ ಶುರುವಾಯಿತು. ಈ ವೇಳೆ ನಾವೆಲ್ಲಾ ಅಪಾರ್ಟ್ಮೆಂಟ್ನಿಂದ ಇಳಿದು ಹೊರಗಡೆ ಬಂದ್ವಿ. ನೋಡ ನೋಡುತ್ತಲೇ ಕಟ್ಟಡ ಕುಸಿಯಿತು ನಮಗೆ ಪಾಲಿಕೆ ಹಾಗೂ ಪೊಲೀಸರು ಸೇರಿ ಪರಿಹಾರ ಕೊಡಿಸಬೇಕು. ನಮ್ಮ ಎಲ್ಲಾ ಚಿನ್ನಾಭರಣ ನಾಶವಾಗಿದೆ. ಅಲ್ಪಸ್ವಲ್ಪ ಹಣ ಕೂಡಿಟ್ಟಿದ್ವಿ, ಅದೂ ಕೂಡ ಹೋಗಿದೆ. ಈಗ ಸಿಕ್ಕಷ್ಟು ಸಿಗಲಿ ಅಂತ ಇಲ್ಲಿ ನಿಂತುಕೊಂಡು ಹುಡುಕುತ್ತಿದ್ದೇವೆ. ನಮ್ಮ ಬದುಕು ಬೀದಿಗೆ ಬಿದ್ದಿದೆ. ನಮಗೆ ನ್ಯಾಯ ಒದಗಿಸಿಕೊಡಬೇಕು ಅಂತಾ ಗೋಳಾಡಿದರು.
ಸೆಕ್ಯೂರಿಟಿ ಗಾರ್ಡ್ ಸಮಯ ಪ್ರಜ್ಞೆ:
ಸೆಕ್ಯುರಿಟಿ ಗಾರ್ಡ್ ಸಮಯ ಪ್ರಜ್ಞೆಯಿಂದ 15 ಜೀವಗಳು ಬದುಕುಳಿದಿವೆ. ಕಟ್ಟಡ ಕುಸಿಯುವ ಸೂಚನೆ ಸಿಗುತ್ತಿದ್ದಂತೆ ಎಚ್ಚೆತ್ತುಕೊಂಡ ಸೆಕ್ಯುರಿಟಿ ಗಾರ್ಡ್ ತಕ್ಷಣ ಅಪಾರ್ಟ್ಮೆಂಟ್ ಪಿಲ್ಲರ್ ಚೆಕ್ ಮಾಡಿದ್ದಾನೆ. ಕಟ್ಟಡದ ಬಲ ಭಾಗದ ಒಂದು ಪಿಲ್ಲರ್ ಕೆಳಗೆ ಕುಸಿಯುತ್ತಿದ್ದಂತೆ ಮನೆ ಮನೆಗೆ ಹೋಗಿ ಮನೆಯವರನ್ನು ಕೆಳಗಡೆ ಕರೆದುಕೊಂಡು ಬಂದಿದ್ದಾನೆ. ಪಕ್ಕದ ಮನೆಯ ಮಾಲೀಕರನ್ನೂ ಕೂಗಿ ಕರೆದಿದ್ದಾನೆ. ಕುಸಿಯುತ್ತಿರುವ ಪಿಲ್ಲರ್ ತೋರಿಸಿ ಮಾಹಿತಿ ಪಡೆದಿದ್ದಾನೆ. ಕಟ್ಟಡ ಕುಸಿಯುತ್ತಿದಂತೆ ಮೊದಲು ಲಿಫ್ಟ್ ಆಫ್ ಮಾಡಿದ್ದಾನೆ. ಮನೆಯಲ್ಲಿ ವಾಸವಾಗಿರೋ ಎಲ್ಲ ಬಾಡಿಗೆದಾರರನ್ನು ಮೆಟ್ಟಿಲುಗಳ ಸಹಾಯದಿಂದ ಕೆಳಗೆ ಇಳಿಸಿದ್ದಾನೆ. ತಕ್ಷಣವೇ ಮನೆಯ ಮಾಲೀಕರ ಗಮನಕ್ಕೆ ತಂದಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಬುದ್ಧಿವಂತಿಕೆಯಿಂದಾಗಿ ಮನೆ ಬಾಡಿಗೆದಾರರ ಜೀವ ಉಳಿದಿದೆ.
ಹಣದಾಸೆಗೆ ಕಟ್ಟಡ ಮಾಲೀಕರು ನಿರ್ಲಕ್ಷ್ಯ ವಹಿಸುತ್ತಿದ್ದು, ಬಿಬಿಎಂಪಿ ಇನ್ನಾದ್ರೂ ಎಚ್ಚೆತ್ತುಕೊಂಡು ಮುಂದಾಗುವ ಅನಾಹುತ ತಪ್ಪಿಸಬೇಕಿದೆ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.