ಬೆಂಗಳೂರು:ಬೆಂಗಳೂರು ಮೂಲದ ಪತ್ರಿಕೋದ್ಯಮ ವಿದ್ಯಾರ್ಥಿನಿಗೆ ಒಂದು ದಿನದ ಮಟ್ಟಿಗೆ 'ಬ್ರಿಟಿಷ್ ಡೆಪ್ಯೂಟಿ ಹೈಕಮಿಷನರ್' ಆಗುವ ಮೂಲಕ ಇಂಗ್ಲೆಂಡ್- ಭಾರತದ ರಾಜತಾಂತ್ರಿಕ ಸಂಬಂಧದ ಬಗ್ಗೆ ತಿಳಿದುಕೊಳ್ಳುವ ಅಪರೂಪದ ಅವಕಾಶ ಲಭಿಸಿದೆ.
ಬ್ರಿಟಿಷ್ ಡೆಪ್ಯೂಟಿ ಕಮಿಷನರ್ ಹುದ್ದೆಯನ್ನು ಜೆರೆಮಿ ಪಿಲ್ಮೋರ್ ಬೆಡ್ಫೋರ್ಡ್ ಅವರಿಂದ ವಿದ್ಯಾರ್ಥಿನಿ ಅಂಬಿಕಾ ಒಂದು ದಿನದ ಮಟ್ಟಿಗೆ ವಹಿಸಿಕೊಂಡರು. ಶುಕ್ರವಾರ ನಡೆದ ಅಧಿವೇಶನವನ್ನು ಅಂಬಿಕಾ ವಹಿಸಿಕೊಂಡಿದ್ದು, ವಿಶ್ವ ಸಂಸ್ಥೆ ಘೋಷಿಸಿದ 'ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನ'ದಂದು ಅಧಿಕಾರ ಚಲಾಯಿಸಿದ್ದ ವಿಶೇಷವಾಗಿತ್ತು.
ನಾನು ಪೂರ್ವ ನಿಯೋಜಿತ ಯೋಜನೆಯಂತೆ ಶಕ್ತಿ ಮಿರಿ ಕೆಲಸ ಮಾಡಿದ್ದೇನೆ. ಬೆಂಗಳೂರಿನ ಬ್ರಿಟಿಷ್ ಡೆಪ್ಯೂಟಿ ಹೈಕಮಿಷನರ್ ಕಚೇರಿಯ ಎಲ್ಲ ಉದ್ಯೋಗಿಗಳನ್ನು ಭೇಟಿಯಾದೆ. ಬಳಿಕ ವೈಟ್‌ಫೀಲ್ಡ್‌ನ ಟೆಸ್ಕೊಗೆ ಭೇಟಿ ಕೊಟ್ಟು, ಲಿಂಗ ಸಮಾನತೆಗಾಗಿ ಹೋರಾಡುತ್ತಿರುವವರು ಹೇಗೆ ಕಾರ್ಯನಿರ್ವಹಿಸುತ್ತಾರೆ ಎಂಬುದರ ಬಗ್ಗೆ ತಿಳಿದುಕೊಂಡೆ. ಈ ವೇಳೆ, ಲಿಂಗ ಸಮಾನತೆ ಹೋರಾಟಗಾರ್ತಿ ವಿದ್ಯಾ ಲಕ್ಷ್ಮಿಯನ್ನೂ ಭೇಟಿ ಮಾಡಿದೆ ಎಂದು ಅಂಬಿಕಾ ಅವರು ಹೇಳಿದರು.
ನನ್ನ ವಿಶೇಷ ಅಧಿಕಾರ ಅವಧಿ ಕೇವಲ ಒಂದು ದಿನದ ಮಟ್ಟಿಗೆ ಇದ್ದಿದ್ದರಿಂದ ಹುದ್ದೆಯ ಸಂಪೂರ್ಣ ಅಧಿಕಾರದ ಕಾರ್ಯವ್ಯಾಪ್ತಿ ತಿಳಿದುಕೊಳ್ಳಲು ಆಗಲಿಲ್ಲ. ಭಾರತ ಮತ್ತು ಇಂಗ್ಲೆಂಡ್ ನಡುವಿನ ರಾಜತಾಂತ್ರಿಕ ಸಂಬಂಧಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡುವ ಅವಕಾಶ ಸಿಕ್ಕಿತು. ಇದೊಂದು ಒಳ್ಳೆಯ ಅನುಭವ. ನಾನು ಆ ಕ್ಷಣಗಳನ್ನು ಆನಂದಿಸಿದ್ದೇನೆ ಎಂದರು.
ಬೆಡ್ಫೋರ್ಡ್ ಮಾತನಾಡಿ, ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಜಾಗತಿಕ ಮಟ್ಟದಲ್ಲಿ ತೆರದಿಡಬೇಕು. ಮಹಿಳೆಯರ ಹಕ್ಕು- ಭಾದ್ಯತೆಗಳಿಗೆ ಇಂಗ್ಲೆಂಡ್ ಸದಾ ಬೆಂಬಲವಾಗಿ ನಿಲ್ಲುತ್ತದೆ. ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದು ಇಂತಹ ವೇದಿಕೆಯನ್ನು ವಿದ್ಯಾರ್ಥಿ ಮೂಲಕ ಸಾಕಾರಗೊಳಿಸಿದ್ದೇವೆ ಎಂದರು.