ಬೆಂಗಳೂರು:ನಿರ್ಮಾಣ ಹಂತದ ಕಟ್ಟಡದ ನೆಲದಡಿಯಲ್ಲಿ ತುಂಬಿದ್ದ ಮಳೆ ನೀರಿನಲ್ಲಿ ಈಜಾಡಲು ಹೋಗಿ ಬಾಲಕ ಸಾವನ್ನಪ್ಪಿರುವ ಘಟನೆ ಕಾಡುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 13 ವರ್ಷದ ಚಂದ್ರು ಸಾವನ್ನಪ್ಪಿದ ಬಾಲಕ.
ಬಾಲಕ ಟ್ಯಾನರಿ ರೋಡ್ನಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಈತನ ತಂದೆ ಮುತ್ತು ಎಂಬುವವರು ಮೇಸ್ತ್ರಿ ಕೆಲಸ ಮಾಡುತ್ತಿದ್ದರೆ, ತಾಯಿ ಗೌತಮಿ ಒಂದು ವರ್ಷದ ಹಿಂದೆ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಇವರು ಕೆ.ಜಿ.ಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಹೆಚ್ಬಿಆರ್ ಲೇಔಟ್ನಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ಬಾಲಕನ ತಂದೆ ಮೇಸ್ತ್ರಿಯಾಗಿ ಕೆಲಸ ಮಾಡುತ್ತಿದ್ದರು. ದಸರಾ ರಜೆ ಹಿನ್ನೆಲೆಯಲ್ಲಿ ಬಾಲಕ ಹಾಗೂ ಆತನ ಸ್ನೇಹಿತರೆಲ್ಲರೂ ಇಂದು ಮಧ್ಯಾಹ್ನ ಕಟ್ಟಡದ ಬಳಿ ಬಂದಿದ್ದಾರೆ. ನೆಲಮಹಡಿಯಲ್ಲಿ ತುಂಬಿಕೊಂಡಿದ್ದ ಸುಮಾರು ಮೂರಡಿ ನೀರಿನಲ್ಲಿ ಈಜಾಡಿದ್ದಾರೆ. ಕಳೆದ ಒಂದು ವಾರದಿಂದ ಈಜಾಡಲು ಬರುತ್ತಿದ್ದರಿಂದ ಯಾರು ತಲೆಕೆಡಿಸಿಕೊಂಡಿರಲಿಲ್ಲ. ಆರು ಮಂದಿ ಬಾಲಕರ ಪೈಕಿ ನಾಲ್ವರು ಈಜಾಡಿ ಮನೆಗೆ ಹೊರಟಿದ್ದಾರೆ.
ಸ್ನೇಹಿತನೋರ್ವನ ಜೊತೆ ಈಜಾಡುವಾಗ ಚಂದ್ರು ಏಕಾಏಕಿ ನೀರಿನಲ್ಲಿ ಮುಳುಗಿದ್ದಾನೆ. ಜೊತೆಯಲ್ಲಿದ್ದ ಮತ್ತೋರ್ವ ಬಾಲಕ ರಕ್ಷಿಸಲಾಗದೆ ಸ್ಥಳೀಯರಿಗೆ ಮಾಹಿತಿ ನೀಡಿದ್ದಾನೆ. ಘಟನೆ ಸಂಬಂಧ ಕೂಡಲೇ ಸ್ಥಳೀಯರು ಕೆ.ಜಿ.ಹಳ್ಳಿ ಠಾಣೆಗೆ ಮಾಹಿತಿ ನೀಡಿ, ಸ್ಥಳಕ್ಕೆ ಅಗ್ನಿಶಾಮಕದಳ ಕರೆಯಿಸಿಕೊಂಡಿದ್ದಾರೆ. ತ್ವರಿತಗತಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಬಾಲಕನನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಸದ್ಯ ಮರಣೋತ್ತರ ಪರೀಕ್ಷೆಗಾಗಿ ಬಾಲಕನ ಶವ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಜಾಗ್ರತ ಕ್ರಮವಾಗಿ ಕಟ್ಟಡದ ನೆಲಮಹಡಿಯಲ್ಲಿ ತುಂಬಿಕೊಂಡಿರುವ ಮಳೆನೀರನ್ನು ಅಗ್ನಿಶಾಮಕ ತಂಡ ಹೊರಗೆ ಸಾಗಿಸುವಲ್ಲಿ ನಿರತವಾಗಿದೆ.
(ಬೆಂಗಳೂರು : ಪಾರ್ಕ್‌ನಲ್ಲಿ ನೀರಿನ ಹೊಂಡಕ್ಕೆ ಬಿದ್ದು ಬಾಲಕ ಸಾವು)