ಕರ್ನಾಟಕ

karnataka

ETV Bharat / city

ಹೊಸದಾಗಿ 2,937 ಗ್ರಾಪಂನಲ್ಲಿ 'ಗ್ರಾಮ ಒನ್' ಯೋಜನೆ ಜಾರಿಗೆ ಸರ್ಕಾರ ಸಿದ್ಧತೆ - ಗ್ರಾಮ ಒನ್ ಯೋಜನೆಯ ಸೇವೆಗಳು

'ಗ್ರಾಮ ಒನ್' ಯೋಜನೆ ಜನಪ್ರಿಯತೆ ಗಳಿಸುತ್ತಿದೆ. 12 ಜಿಲ್ಲೆಗಳ 3,026 ಗ್ರಾಮ ಪಂಚಾಯತ್‌ಗಳಲ್ಲಿ ಗ್ರಾಮ ಒನ್ ಯೋಜನೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿತ್ತು. ಹೊಸದಾಗಿ 2,937 ಗ್ರಾಮ ಪಂಚಾಯತ್‌ಗಳಲ್ಲಿ ಸರ್ಕಾರ ಗ್ರಾಮ ಒನ್ ಯೋಜನೆಯನ್ನು ಜಾರಿ ಮಾಡಲಿದೆ..

ಗ್ರಾಮ ಒನ್ ಯೋಜನೆಯ ಸೇವೆಗಳು
ಹೊಸದಾಗಿ 2,937 ಗ್ರಾ.ಪಂ.ನಲ್ಲಿ 'ಗ್ರಾಮ ಒನ್' ಯೋಜನೆ ಜಾರಿಗೆ ಸರ್ಕಾರ ಸಿದ್ಧತೆ

By

Published : Apr 16, 2022, 5:32 PM IST

ಬೆಂಗಳೂರು: 'ಗ್ರಾಮ ಒನ್' ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ. ಎಲ್ಲ ಇಲಾಖೆಗಳ ನಾಗರಿಕ ಸೇವೆಗಳನ್ನು ಗ್ರಾಮೀಣ ನಾಗರಿಕರಿಗೆ ಅವರ ಗ್ರಾಮಗಳಲ್ಲಿಯೇ ತಲುಪಿಸುವ ಗುರಿಯನ್ನು ಈ ಗ್ರಾಮ ಒನ್ ಯೋಜನೆ ಹೊಂದಿದೆ. ಈ ಯೋಜನೆಯನ್ನು ನಾಗರಿಕ ಕೇಂದ್ರಿತ ಸೇವೆಗಳಾದ ಜಿ2ಸಿ ಸೇವೆಗಳು, ಬ್ಯಾಂಕಿಂಗ್ ಸೇವೆಗಳು, ಆರ್​ಟಿಐ ಪ್ರಶ್ನೆಗಳು ಸೇರಿದಂತೆ ಇನ್ನಿತರೆ ಸೇವೆಗಳನ್ನು ಗ್ರಾಮ ಮಟ್ಟದಲ್ಲಿ ಎಲ್ಲಾ ನಾಗರಿಕರಿಗೆ ತಲುಪಿಸುವ ಏಕ ಸಹಾಯ ಕೇಂದ್ರವಾಗಿರುವಂತೆ ರೂಪಿಸಲಾಗಿದೆ.

ಯೋಜನೆಯನ್ನು 2020-21ರ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ವಾರದ ಎಲ್ಲ ದಿನಗಳಲ್ಲಿ ಗ್ರಾಮ ಒನ್ ಕೇಂದ್ರಗಳು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯ ನಿರ್ವಹಿಸುತ್ತವೆ. ಈಗಾಗಲೇ ಸಕಾಲ ಯೋಜನೆಯಡಿ ಸಕಾಲದಲ್ಲಿ ಹಲವು ಸೇವೆಗಳನ್ನು ಒದಗಿಸಲಾಗುತ್ತಿದೆ. ರಾಜ್ಯದ ಎಲ್ಲಾ ಗ್ರಾಮಗಳಲ್ಲಿ ಇಂತಹ ಕೇಂದ್ರ ಆರಂಭವಾಗಲಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಬೆಂಗಳೂರು-ಒನ್, ಕರ್ನಾಟಕ-ಒನ್ ರೀತಿಯಲ್ಲಿ ಹಲವು ಸೇವೆಗಳು ಈ ಯೋಜನೆಯಡಿ ದೊರಕಲಿವೆ. ಮಾಹಿತಿ ಹಕ್ಕು ಕಾಯ್ದೆ ಸೇವೆ, ಮುಖ್ಯಮಂತ್ರಿಗಳ ಪರಿಹಾರ ಸೇವೆಗಳು, ಕೃಷಿ ಇಲಾಖೆ ಸೇವೆಗಳು, ಕಾರ್ಮಿಕ ಇಲಾಖೆ ಸೇವೆಗಳು, ವೃದ್ಧಾಪ್ಯ ವೇತನ, ಅಂಗವಿಕಲರ ವೇತನ ಒಳಗೊಂಡಂತೆ ಹಲವು ಸೇವೆಗಳು ಗ್ರಾಮ ಒನ್​​​ನಲ್ಲಿ ಸಿಗಲಿವೆ.

ವಿಸ್ತರಣೆ : ಈ ಯೋಜನೆ ದಿನದಿಂದ ದಿನಕ್ಕೆ ಜನಪ್ರಿಯತೆ ಗಳಿಸುತ್ತಿದೆ. ನೂರಾರು ಸೌಲಭ್ಯ, ಸೇವೆಗಳು ಒಂದೇ ಸೂರಿನಡಿ ಲಭ್ಯವಿರುವುದಕ್ಕೆ ನಾಗರಿಕರು ಸಹ ಸಂತಸ ವ್ಯಕ್ತಪಡಿಸಿದ್ದಾರೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರಿ ಸೇವೆಗಳನ್ನು ಗ್ರಾಮಸ್ಥರಿಗೆ ತಲುಪಿಸುವ ಗ್ರಾಮ ಒನ್‌ ಯೋಜನೆಯನ್ನು ರಾಜ್ಯದ ಎಲ್ಲ ಗ್ರಾಮ ಪಂಚಾಯತ್‌ಗಳಲ್ಲಿ ಜಾರಿಗೊಳಿಸಲು ಸರ್ಕಾರ ತೀರ್ಮಾನಿಸಿದೆ.

ಹೊಸದಾಗಿ 2,937 ಗ್ರಾಪಂನಲ್ಲಿ ಯೋಜನೆ ಜಾರಿ : ಕಳೆದ ಜನವರಿಯಲ್ಲಿ ಸುಮಾರು 12 ಜಿಲ್ಲೆಗಳ 3,026 ಗ್ರಾಮ ಪಂಚಾಯತ್‌ಗಳಲ್ಲಿ ಗ್ರಾಮ ಒನ್ ಯೋಜನೆಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಮೊದಲ ಬಜೆಟ್‌ ಭಾಷಣದಲ್ಲೂ ಗ್ರಾಮ ಒನ್ ಯೋಜನೆಯನ್ನು ರಾಜ್ಯ ವ್ಯಾಪಿ ಜಾರಿಗೊಳಿಸುವುದಾಗಿ ಪ್ರಕಟಿಸಿದ್ದರು.

ನಗರ ಪ್ರದೇಶಗಳಲ್ಲಿ ಜನರಿಗೆ ಸೇವೆ ನೀಡುತ್ತಿರುವ ಕರ್ನಾಟಕ ಒನ್, ಬೆಂಗಳೂರು ಒನ್ ಮಾದರಿಯಲ್ಲಿ 'ಗ್ರಾಮ ಒನ್' ಮೂಲಕ ಹಳ್ಳಿಯ ಜನತೆಗೂ ಸೇವೆ ನೀಡಲು ಉದ್ದೇಶಿಸಿರುವ ಸರ್ಕಾರ ಹೊಸದಾಗಿ 2,937 ಗ್ರಾಮ ಪಂಚಾಯತ್‌ಗಳಲ್ಲಿ ಗ್ರಾಮ ಒನ್ ಯೋಜನೆ ಜಾರಿ ಮಾಡಲಿದೆ. ಶೀಘ್ರದಲ್ಲೇ ಒಟ್ಟು 5,963 ಗ್ರಾಮ ಪಂಚಾಯತ್‌ಗಳು ಈ ಯೋಜನೆ ವ್ಯಾಪ್ತಿಗೆ ಸೇರಲಿವೆ.

ಇದನ್ನೂ ಓದಿ:ಬಿಜೆಪಿ ಕಾರ್ಯಕಾರಿಣಿ ಸಭೆ : ಮುಂದಿನ ವಿಧಾನಸಭಾ ಚುನಾವಣೆಗೆ ನೀಲನಕ್ಷೆ!?

ಈಗಾಗಲೇ ಬೀದರ್, ಬಳ್ಳಾರಿ, ಕೊಪ್ಪಳ, ಹಾವೇರಿ, ವಿಜಯಪುರ, ಬೆಳಗಾವಿ, ಶಿವಮೊಗ್ಗ, ದಾವಣಗೆರೆ, ತುಮಕೂರು, ಚಿಕ್ಕಮಗಳೂರು, ಕೊಡಗು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದೆ. ಗ್ರಾಮ ಒನ್ ಕೇಂದ್ರಗಳ ಆರಂಭದಿಂದ ಸರ್ಕಾರಿ ಸೇವೆಗಳನ್ನು ಪಡೆಯಲು ನಾಗರಿಕರು ಈಗ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ. ಈ ಮೂಲಕ ನಾಗರಿಕರು ಸಮಯ ಹಾಗೂ ಹಣ ಉಳಿಸಬಹುದು. ಮಧ್ಯವರ್ತಿಗಳ ಹಾವಳಿ ಸಹ ಇರುವುದಿಲ್ಲ.

ಸೇವೆಗಳಲ್ಲಿರುವುದೇನು?ಕಂದಾಯ, ಆರೋಗ್ಯ, ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ , ಕಾರ್ಮಿಕ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಸಂಧ್ಯಾ ಸುರಕ್ಷಾ, ಜಮೀನಿಗೆ ಸಂಬಂಧಿಸಿದ ಪಹಣಿ, ರಾಜ್ಯ ಪೊಲೀಸ್‌ ಇಲಾಖೆ ಸೇವೆಗಳು, ಕೃಷಿ ಇಲಾಖೆ ಸೇವೆಗಳು, ರೇಷ್ಮೆ ಇಲಾಖೆ ಸೇವೆಗಳು, ಪಶುಸಂಗೋಪನೆ ಇಲಾಖೆ ಸೇವೆಗಳು, ಮಾಹಿತಿ ಹಕ್ಕು ಕಾಯ್ದೆ ಸೇವೆಗಳು, ಸಿಎಂ ಪರಿಹಾರ ನಿಧಿ ಸೇವೆಗಳು ಸೇರಿದಂತೆ 750ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು ಗ್ರಾಮದಲ್ಲಿಯೇ ನೀಡುವ ಗುರಿ ಹೊಂದಿದ್ದು, ಪ್ರಸ್ತುತ ಪ್ರತಿ ಕೇಂದ್ರದಲ್ಲಿ 400ಕ್ಕೂ ಹೆಚ್ಚು ಸೇವೆಗಳನ್ನು ನೀಡಲಾಗುತ್ತಿದೆ.

ABOUT THE AUTHOR

...view details