ಬೆಂಗಳೂರು :ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಹಾಗೂ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಮೌದ್ಗಿಲ್ ನಡುವಿನ ಕಿತ್ತಾಟ ಇದೀಗ ಮುಖ್ಯಮಂತ್ರಿಗಳ ಅಂಗಳ ತಲುಪಿದೆ. ರೂಪಾ ವಿರುದ್ಧ ದೂರು ನೀಡಿದ ಬೇಳೂರು ರಾಘವೇಂದ್ರ ಶೆಟ್ಟಿ, ತಮ್ಮಿಬ್ಬರ ಆರೋಪಗಳ ಕುರಿತು ಸಮಗ್ರವಾದ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ಆರ್.ಟಿ ನಗರದಲ್ಲಿರುವ ಸಿಎಂ ಖಾಸಗಿ ನಿವಾಸಕ್ಕೆ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಭೇಟಿ ನೀಡಿದರು. ತಮ್ಮ ವಿರುದ್ಧ ಸಿಎಸ್ಗೆ ದೂರು ನೀಡಿರುವುದಕ್ಕೆ ಪ್ರತಿಯಾಗಿ ನಿಗಮದ ವ್ಯವಸ್ಥಾಪಕಿ ಡಿ.ರೂಪಾ ವಿರುದ್ಧ ಸಿಎಂಗೆ ಪ್ರತಿ ದೂರು ನೀಡಿದ್ದಾರೆ ರಾಘವೇಂದ್ರ ಶೆಟ್ಟಿ. ಕರ್ತವ್ಯಕ್ಕೆ ಅಡ್ಡಿಪಡಿಸಿ ಕಿರುಕುಳ ನೀಡಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಿಎಂ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು ರಾಘವೇಂದ್ರ ಶೆಟ್ಟಿ, ಮಾಧ್ಯಮಕ್ಕೆ ಮೊದಲು ಹೋಗಿದ್ದು ರೂಪಾ. ಸಿಎಸ್ಗೆ ಮೊದಲು ಲೆಟರ್ ಬರೆದದ್ದು ಕೂಡ ಅವರೇ.. ಈ ವಿಚಾರವಾಗಿ ಸಿಎಂ ಭೇಟಿಯಾಗಿ ಅವರ ಗಮನಕ್ಕೆ ತಂದಿದ್ದೇನೆ. ಈ ವಿಚಾರದ ಬಗ್ಗೆ ಸಂಪೂರ್ಣ ತನಿಖೆ ಮಾಡಲಿ. ಅವರು ಏನು ಆರೋಪ ಮಾಡಿದ್ದಾರೆ ಅದನ್ನೂ ತನಿಖೆ ಮಾಡಲಿ. ನಾನು ಏನು ಹೇಳುತ್ತಿದ್ದೇನೆ ಅದನ್ನೂ ಸಹ ತನಿಖೆ ಮಾಡಲಿ ಎಂದು ಸಿಎಂಗೆ ಹೇಳಿದ್ದೇನೆ ಎಂದರು.
ಹೇಳಿರೋದಕ್ಕೆ ದಾಖಲೆ ಇದ್ಯಾ!? :ದಿನ ಬೆಳಗಾದರೆ ವಾಟ್ಸ್ಆ್ಯಪ್ನಲ್ಲಿ ಮಾಧ್ಯಮಗಳಿಗೆ ಸ್ಟೇಟ್ಮೆಂಟ್ ಕಳಿಸೋದು, ಯಾವುದೋ ಆಧಾರ ರಹಿತ ಆರೋಪ ಮಾಡೋದು ಮಾಡುತ್ತಿದ್ದಾರೆ. ಅವರಿಗೆ ಸರ್ಕಾರದ ಲೆಟರ್ ಹೆಡ್ ಇದೆ. ಐಪಿಎಸ್ ಎಂಬ ಟ್ಯಾಗ್ ಇದೆ. ಇದರ ಜೊತೆಗೆ 1234 ಅಂತಾ ಹಾಕಿ ಅದನ್ನು ಬಳಿಸಿಕೊಂಡು ಎಲ್ಲಾ ಪೇಪರ್ಗೆ ಕಳುಹಿಸೋದು, ಆ್ಯಸಿಡ್ ಹಾಕ್ತೀನಿ ಎಂದು ಹೇಳಿರೋದಕ್ಕೆ ದಾಖಲೆ ಇದ್ಯಾ? ಏನಾದರು ವಿಡಿಯೋ ಫೂಟೇಜ್ ಇದೆಯಾ? ಅವರ ಘನೆತೆಗಿಂತ ಕೆಳಗಡೆ ಬಂದು ಮಾತನಾಡುತ್ತಿದ್ದಾರೆ. ಐಪಿಎಸ್ ಹುದ್ದೆಗೆ ಅಪಚಾರ ಮಾಡುತ್ತಿದ್ದಾರೆ. ಇದನ್ನೆಲ್ಲಾ ಸಿಎಂ ಗಮನಕ್ಕೆ ತಂದಿದ್ದೇನೆ, ಇದನ್ನು ತನಿಖೆಗೆ ಒಳಪಡಿಸುವ ಭರವಸೆ ಇದೆ. ಸಿಎಸ್ರನ್ನೂ ಸಹ ಭೇಟಿಯಾಗಿ ಅವರ ಗಮನಕ್ಕೆ ತಂದಿದ್ದೇನೆ ಎಂದರು.