ಕರ್ನಾಟಕ

karnataka

ETV Bharat / city

ಉಪ ಚುನಾವಣೆ ನಂತರ ಬಳ್ಳಾರಿ ವಿಭಜನೆ ಬಗ್ಗೆ ನಿರ್ಧಾರ ಕೈಗೊಳ್ತಾರಂತೆ ಸಿಎಂ ಯಡಿಯೂರಪ್ಪ.. - somashekara Reddy

ಡಿಸೆಂಬರ್​ನಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಇರುವುದರಿಂದ ಆವರೆಗೆ ಬಳ್ಳಾರಿ ವಿಭಜನೆ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದಂತೆ ಬಳ್ಳಾರಿ ಜಿಲ್ಲಾ ಜನಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ಸಿಎಂ ಯಡಿಯೂರಪ್ಪ ತೀರ್ಮಾನಿಸಿದ್ದಾರೆ.

ಬಿ.ಎಸ್.ಯಡಿಯೂರಪ್ಪ

By

Published : Oct 2, 2019, 8:31 PM IST

ಬೆಂಗಳೂರು: ಡಿಸೆಂಬರ್​ನಲ್ಲಿ ವಿಜಯನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಇರುವುದರಿಂದ ಆವರೆಗೆ ಬಳ್ಳಾರಿ ವಿಭಜನೆ ಕುರಿತು ಯಾವುದೇ ನಿರ್ಧಾರ ಕೈಗೊಳ್ಳದಿರಲು ಬಳ್ಳಾರಿ ಜಿಲ್ಲಾ ಜನಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ಸಿಎಂ ಬಿ ಎಸ್ ಯಡಿಯೂರಪ್ಪ ತೀರ್ಮಾನಿಸಿದ್ದಾರೆ.

ಬಳ್ಳಾರಿ ವಿಭಜನೆ ಕುರಿತು ನಡೆದ ಸಭೆ ಬಳಿಕ ಸಚಿವರು, ಶಾಸಕರುಗಳ ಪ್ರತಿಕ್ರಿಯೆ..

ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ‌ ಬಳ್ಳಾರಿ ಜಿಲ್ಲೆ ವಿಭಜನೆ ಕುರಿತು ಮಹತ್ವದ ಸಭೆ ನಡೆಸಲಾಯಿತು. ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ಸಚಿವ ಶ್ರೀರಾಮುಲು, ಬಳ್ಳಾರಿ ಉಸ್ತುವಾರಿ ಸಚಿವ ಲಕ್ಷ್ಮಣ್ ಸವದಿ, ಶಾಸಕ ಕರುಣಾಕರ ರೆಡ್ಡಿ, ಸೋಮಶೇಖರ್ ರೆಡ್ಡಿ, ಭೀಮಾ ನಾಯಕ್, ನಾಗೇಂದ್ರ, ಅನರ್ಹ ಶಾಸಕ ಆನಂದ್ ಸಿಂಗ್, ಕಾಂಗ್ರೆಸ್ ಪರಿಷತ್ ಸದಸ್ಯ ಕೆ ಸಿ ಕೊಂಡಯ್ಯ, ಅಲ್ಲಮ ವೀರಭದ್ರಪ್ಪ, ಕಾಂಗ್ರೆಸ್ ಶಾಸಕ ಪಿ ಟಿ ಪರಮೇಶ್ವರ್ ನಾಯಕ್, ಕಂಪ್ಲಿ ಶಾಸಕ ಗಣೇಶ್ ಉಪಸ್ಥಿತರಿದ್ದರು.

ಸಭೆ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ್, ವಿಜಯನಗರ ಪ್ರತ್ಯೇಕ ಜಿಲ್ಲೆಗೆ ಕಂದಾಯ ಇಲಾಖೆಗೆ ಪ್ರಸ್ತಾವನೆ ಬಂದಿತ್ತು. ಅದನ್ನ ಮುಖ್ಯಮಂತ್ರಿಗಳಿಗೆ ಕಳುಹಿಸಿಕೊಡಲಾಗಿತ್ತು. ಆ ನಿಟ್ಟಿನಲ್ಲಿ ಇವತ್ತು ಮುಖ್ಯಮಂತ್ರಿಗಳು ಸಭೆ ನಡೆಸಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿದರು. ಕೆಲವರು ಚಿಕ್ಕ ಜಿಲ್ಲೆಯಾದರೆ ಅಭಿವೃದ್ಧಿಗೆ ಅನುಕೂಲ ಆಗುತ್ತೆ ಅಂತಾ ಹೇಳಿದ್ದಾರೆ. ಆದರೆ, ಡಿಸೆಂಬರ್ 5 ರಂದು ಉಪ ಚುನಾವಣೆ ಇರುವ ಹಿನ್ನೆಲೆ ಪ್ರಸ್ತಾವನೆಗೆ ತಡೆ ಹಿಡಿಯಲಾಗಿದೆ. ಉಪ ಚುನಾವಣೆ ಬಳಿಕ ಮತ್ತೊಮ್ಮೆ ಎಲ್ಲರ ಜೊತೆ ಸಭೆ ನಡೆಸಲಾಗುವುದು. ಆ ಬಳಿಕ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದರು.

ಸಚಿವ ಶ್ರೀರಾಮುಲು ಮಾತನಾಡಿ, ಮುಖ್ಯಮಂತ್ರಿಗಳು ಕೊಪ್ಪಳ, ದಾವಣಗೆರೆ, ಬಳ್ಳಾರಿ ಜಿಲ್ಲೆಯ ಸಂಸದರು, ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ. ಈ ಸಭೆಯನ್ನ ಇನ್ನೊಂದು ಬಾರಿ ಕರೆದು ಮತ್ತೊಮ್ಮೆ ಅಭಿಪ್ರಾಯ ತೆಗೆದುಕೊಳ್ಳುತ್ತಾರೆ. ಯಾವುದೇ ನಿರ್ಧಾರ ತೆಗೆದುಕೊಳ್ಳಲು ಎಲ್ಲರ ಅಭಿಪ್ರಾಯ ತೆಗೆದುಕೊಳ್ಳಬೇಕು. ಚಿಂತಕರು, ಸಾಹಿತಿಗಳು, ಬರಹಗಾರರು ಎಲ್ಲರ ಅಭಿಪ್ರಾಯ ತೆಗೆದುಕೊಳ್ಳಬೇಕು ಎಂದರು.

ಅನರ್ಹ ಶಾಸಕ ಆನಂದ್ ಸಿಂಗ್ ಮಾತನಾಡಿ, ವಿಜಯನಗರ ಜಿಲ್ಲೆ ಆಗಲೇಬೇಕು ಅನ್ನೋ ಹೋರಾಟದಲ್ಲಿ ನಾನು ಮುಂಚೂಣಿಯಲ್ಲಿ ಇರುತ್ತೇನೆ. ಸಭೆಯಲ್ಲಿ ಎಲ್ಲರೂ ಚರ್ಚೆ ಮಾಡಿದ್ದೇವೆ. ಆತುರದಲ್ಲಿ ತೀರ್ಮಾನ ಮಾಡೋದು ಬೇಡ. ಈ ಹೋರಾಟ ಆನಂದ್ ಸಿಂಗ್ ಇಂದ ಶುರುವಾಗಿದ್ದಲ್ಲ, ಮೊದಲಿನಿಂದಲೂ ಇತ್ತು. ಸಿಎಂ ಹಾಗೂ ಆರ್.ಅಶೋಕ್ ಅವರು ಉಪಚುನಾವಣೆ ಬಳಿಕ ಈ ಬಗ್ಗೆ ಚರ್ಚೆ ಮಾಡೋಣ, ಆವರೆಗೆ ಇದನ್ನು ಮುಂದೂಡೋಣ ಅಂತಾ ಹೇಳಿದರು. ಹಾಗಾಗಿ ಮತ್ತೊಂದು ದಿನ ಸಭೆ ನಡೆಸಲು ತೀರ್ಮಾನ ಮಾಡಲಾಗಿದೆ ಎಂದರು.

ಶಾಸಕ ಸೋಮಶೇಖರ ರೆಡ್ಡಿ ಮಾತನಾಡಿ, ಬಳ್ಳಾರಿ ಹೆಸರನ್ನು ತೆಗೆದು ಹಾಕಿ ವಿಜಯನಗರ ಎಂದು ಮರು ನಾಮಕರಣ ‌ಮಾಡಿದರೆ ಇದಕ್ಕೆ ನಮ್ಮೆಲ್ಲರ ಸಹಕಾರ ಇದೆ. ಜಿಲ್ಲಾ ಕೇಂದ್ರದಿಂದ ಕೆಲ‌ ಕಚೇರಿಗಳನ್ನು ಸ್ಥಳಾಂತರ ಮಾಡಿದರೂ ಅಭ್ಯಂತರ ಇಲ್ಲ. ಆದರೆ, ಬಳ್ಳಾರಿಯಿಂದ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ರಚನೆ ಮಾಡೋದು ಬೇಡ. ಅಖಂಡ ಜಿಲ್ಲೆಯಾಗಿ ಇರಬೇಕು ಎಂದರು.

ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ಮಾತನಾಡಿ, ಅಖಂಡ ಜಿಲ್ಲೆಯಾಗಿಯೇ ಬಳ್ಳಾರಿ ಇರಬೇಕು ಅನ್ನೋದು ಎಲ್ಲರ ಅಭಿಪ್ರಾಯ. ಒಂದು ವೇಳೆ ಎರಡು ಜಿಲ್ಲೆ ಮಾಡ್ತೀರಾ ಅಂದರೆ ಒಂದು ಸಮಿತಿ ಮಾಡಿ ಆ ಸಮಿತಿಯಲ್ಲಿ ವರದಿ ತರಿಸಿಕೊಳ್ಳಿ. ಪಶ್ಚಿಮ ಭಾಗದ ಐದು ತಾಲೂಕಿಗಳು ನಂಜುಂಡಪ್ಪ ವರದಿಯಲ್ಲಿ ಹಿಂದುಳಿದಿವೆ ಎಂದು ತಿಳಿಸಿವೆ. ಜೊತೆಗೆ ಪ್ರತ್ಯೇಕ ಜಿಲ್ಲೆ ಮಾಡಿದ್ದೇ ಆದರೆ ಹಗರಿಬೊಮ್ಮನಹಳ್ಳಿ ಜಿಲ್ಲೆ ಮಾಡಿ ಅಂತಾ ಕೇಳಿದ್ದೇವೆ. ಹೀಗಾಗಿ ಹಗರಿಬೊಮ್ಮನಹಳ್ಳಿಯನ್ನ ಜಿಲ್ಲಾ ಕೇಂದ್ರ ಮಾಡಿ ಎಂದು ಸಿಎಂಗೆ ಮನವಿ ಮಾಡಿದ್ದೇವೆ ಎಂದರು.

ABOUT THE AUTHOR

...view details