ಕರ್ನಾಟಕ

karnataka

ETV Bharat / city

ನೊರೆ ಮುಕ್ತವಾದ ಬೆಳ್ಳಂದೂರು, ವರ್ತೂರು ಕೆರೆ...ವರದಾನವಾಯ್ತಾ ಲಾಕ್​ಡೌನ್​​...? - Foam free Bellanduru lake

ಲಾಕ್​​ಡೌನ್​​​​ನಿಂದ ಕೆಲವರಿಗೆ ತೊಂದರೆಯಾಗಿದ್ದರೂ ಮತ್ತೆ ಕೆಲವರಿಗೆ ಅದೇ ವರದಾನವಾಗಿದೆ. ಬೆಂಗಳೂರಿನ ಬೆಳ್ಳಂದೂರು ಹಾಗೂ ವರ್ತೂರು ಕೆರೆ ಈಗ ನೊರೆ ಮುಕ್ತವಾಗಿದ್ದು ಬೆಳ್ಳಂದೂರು ಗ್ರಾಮಸ್ಥರು ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

Bellanduru and Varturu lake is now foam free
ನೊರೆಮುಕ್ತ ಬೆಳ್ಳಂದೂರು ಕೆರೆ

By

Published : Apr 30, 2020, 9:06 PM IST

ಬೆಂಗಳೂರು: ಕೊರೊನಾ ವೈರಸ್​​​​ ಭೀತಿಯಿಂದ ಜನರು ಮನೆಯಲ್ಲಿ ಉಳಿದುಕೊಂಡಿದ್ದಾರೆ. ಜನರು ಮನೆಯಿಂದ ಹೊರ ಬರದಿರುವುದಕ್ಕೆ ರಸ್ತೆಗಳು ಸ್ವಚ್ಛವಾಗಿವೆ. ಕಲುಷಿತವಾಗಿದ್ದ ವಾತಾವರಣ ತಿಳಿಯಾಗಿದೆ. ಅದೇ ರೀತಿ ಈ ಲಾಕ್​ಡೌನ್ ನಮಗೆ ವರವಾಗಿದೆ ಎಂದು ಬೆಳ್ಳಂದೂರು ಗ್ರಾಮಸ್ಥರು ಕೂಡಾ ಸಂತೋಷ ವ್ಯಕ್ತಪಡಿಸಿದ್ದಾರೆ.

ನೊರೆ ಮುಕ್ತವಾದ ಬೆಳ್ಳಂದೂರು, ವರ್ತೂರು ಕೆರೆ

ಇದಕ್ಕೆ ಕಾರಣ ಲಾಕ್​ಡೌನ್​ ಘೋಷಣೆಯಾದ ಬಳಿಕ ಪರಿಸರದಲ್ಲಿ ಕೆಲವು ಉತ್ತಮ ಬದಲಾವಣೆಯಾಗುತ್ತಿದೆ. ಮಾಲಿನ್ಯದ ಕಾರಣ ಯಾವಾಗಲೂ ಬೆಳ್ಳನೆಯ ನೊರೆಯಿಂದ ಕೂಡಿರುತ್ತಿದ್ದ ಬೆಳ್ಳಂದೂರು ಹಾಗೂ ವರ್ತೂರು ಕೆರೆಯ ನೋಟ ಈಗ ಬದಲಾಗಿದೆ. ಹೀಗೆ ಕಣ್ಣಿಗೆ ಕಾಣುವಷ್ಟೂ ಕಂಗೊಳಿಸುವ ಹಚ್ಚ ಹಸಿರು, ಚಿಲಿಪಿಲಿ ಹಕ್ಕಿಗಳ ಕಲರವ, ಹರಿಯುವ ನೀರಿನ ಜುಳು ಜುಳು ನಾದ, ಇದೆಲ್ಲಾ ಕಂಡು ಬಂದಿದ್ದು ಬೆಂಗಳೂರಿನ ಕುಖ್ಯಾತಿಗೆ ಕಾರಣವಾಗಿದ್ದ ಬೆಳ್ಳಂದೂರು ಹಾಗೂ ವರ್ತೂರು ಕರೆಯ ಅಂಗಳದಲ್ಲಿ. ಕಳೆದ ಒಂದು ತಿಂಗಳಿನಿಂದ ಲಾಕ್​​ಡೌನ್​ ಇರುವ ಕಾರಣ ನಗರದ ಎಲ್ಲಾ ಕಾರ್ಖಾನೆಗಳು, ವಾಣಿಜ್ಯ ಮಳಿಗೆಗಳು ಸಂಪೂರ್ಣ ಬಂದ್ ಆಗಿದ್ದು, ಕಲುಷಿತ ನೀರು ಹರಿಯುವಿಕೆ ಸಂಪೂರ್ಣ ಸ್ಥಗಿತಗೊಂಡಿದೆ. ಆದ ಕಾರಣ ಕೆರೆಯಲ್ಲಿ ದುರ್ನಾತ, ಸೊಳ್ಳೆಗಳ ಕಾಟ, ವಿಷಕಾರಕ ನೊರೆ ಎಲ್ಲವೂ ಸಂಪೂರ್ಣ ಬಂದ್ ಆಗಿದೆ ಎಂದು ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದ್ದಾರೆ.

ಕಲುಷಿತಗೊಂಡು ಯಾವಾಗಲೂ ದುರ್ನಾತ ಬೀರುತ್ತಿದ್ದ ಬೆಳ್ಳಂದೂರು ಮತ್ತು ವರ್ತೂರು ಕೆರೆ ಬಹಳಷ್ಟು ದೊಡ್ಡದಾಗಿದೆ. ಈ ಕೆರೆಗೆ ನಗರದ ಎಲ್ಲೆಡೆಯಿಂದ ಕಲುಷಿತ ನೀರು ಬಂದು ಸೇರುತ್ತಿತ್ತು. ಇದರಿಂದ ಅಂತರ್ಜಲ ಕೂಡಾ ಕುಸಿದಿತ್ತು. ಇದರಿಂದ ನಾವೆಲ್ಲಾ ಕುಡಿಯುವ ನೀರಿಗೆ ಕೂಡಾ ಪರದಾಡುವಂತಾಗಿತ್ತು ಎಂದು ಗ್ರಾಮಸ್ಥರು ಹೇಳಿದ್ದಾರೆ. ಸರ್ಕಾರ, ಬಿಬಿಎಂಪಿ, ಬಿಡಿಎ, ಮಾಲಿನ್ಯ ನಿಯಂತ್ರಣ ಮಂಡಳಿ 4-5 ವರ್ಷಗಳ ಹಿಂದೆ ಪ್ರಯತ್ನ ಮಾಡಿದ್ದರೂ ನೊರೆಯನ್ನು ತಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಲಾಕ್​​ಡೌನ್ ವೇಳೆ ಇವೆಲ್ಲಾ ಹತೋಟಿಗೆ ಬಂದಿದೆ.

ಈ ಹಿನ್ನೆಲೆ ಸದ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೆರೆ ನೀರಿನ ಸ್ಯಾಂಪಲನ್ನು ಪರೀಕ್ಷೆಗೆ ಕಳಿಸಿದೆ. ಕೆಲವೇ ದಿನಗಳಲ್ಲಿ ಎಷ್ಟು ಪ್ರಮಾಣದಲ್ಲಿ ಮಾಲಿನ್ಯ ಕಡಿಮೆ ಆಗಿದೆ ಎಂದು ತಿಳಿಯುತ್ತದೆ. ಅದೇನೆ ಇರಲಿ ಕೊರೊನಾ ವೈರಸ್​​​​​​ ಜನರಿಗೆ ತೊಂದರೆ ನೀಡಿದ್ದರೂ ವರ್ತೂರು ಬೆಳ್ಳಂದೂರು ಕೆರೆ ಪ್ರೇಮಿಗಳಿಗೆ ಸ್ವಲ್ಪ ನೆಮ್ಮದಿಯನ್ನು ತಂದುಕೊಟ್ಟಿದೆ ಎನ್ನಬಹುದು. ಕುಖ್ಯಾತಿ ಪಡೆದಿದ್ದ ಈ ಕೆರೆಯನ್ನು ಮುಂದಾದರೂ ಇದೇ ರೀತಿ ಸ್ವಚ್ಛವಾಗಿಡಲು ಅಧಿಕಾರಿಗಳು ಮುಂದಾಗುತ್ತಾರಾ ಎಂಬುದನ್ನು ಕಾದುನೋಡಬೇಕು.

ABOUT THE AUTHOR

...view details