ಬೆಳಗಾವಿ: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಿಂದ ವಿವಿಧ ಸ್ಥಳಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕ ಅನಿಲ ಬೆನಕೆ ಪರಿಶೀಲನೆ ಮಾಡಿದ್ದರು. ಇದೇ ವೇಳೆ ವಿವಿಧ ಕಡೆಗಳಲ್ಲಿ ರಸ್ತೆ ಅತಿಕ್ರಮಣ ಪ್ರದೇಶಗಳನ್ನು ತೆರವುಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಗೋಗಟೆ ಸರ್ಕಲ್, ಆರ್ಟಿಓ ಸರ್ಕಲ್‍ನ ಶಿವಮಂದಿರ, ಬಸ್ ನಿಲ್ದಾಣ ಪ್ರದೇಶ ಹಾಗೂ ಬಸವೇಶ್ವರ ವೃತ್ತ ಸೇರಿದಂತೆ ಇತರ ಪ್ರದೇಶದಲ್ಲಿ ರಸ್ತೆ ಅತಿಕ್ರಮಿಸಿ ನಿರ್ಮಿಸಿದ ಕಟ್ಟಡಗಳನ್ನು ಕ್ಯಾಂಟೋನ್ಮೆಂಟ್, ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ ಅಧಿಕಾರಿಗಳೊಂದಿಗೆ ಶಾಸಕ ಅನಿಲ್ ಬೆನಕೆ ಪರಿಶೀಲಿಸಿದರು.
ಸ್ಮಾರ್ಟ್ ಸಿಟಿ ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ನಡಿಸಿದ ಶಾಸಕ ಅನಿಲ್ ಬೆನಕೆ ಬಳಿಕ ಮಾತನಾಡಿದ ಶಾಸಕರು, ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರದಲ್ಲಿ ರಸ್ತೆಗಳನ್ನು ಅತಿಕ್ರಮಿಸಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಹೀಗಾಗಿ ರಸ್ತೆ ಅತಿಕ್ರಮಿಸಿದ ಮಂದಿರ ಮತ್ತು ಬಜಾರ್ಗಳ ತೆರವು ಕಾರ್ಯಾಚರಣೆ ನಡೆಯಬೇಕು. ಯಾವುದೇ ಕಟ್ಟಡ ಇರಲಿ, ಅವುಗಳನ್ನು ತೆರವುಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಬೇಕು. ಆಯಾ ಸಮಾಜದವರು ತಮ್ಮ ಸಮಾಜದ ಹಿರಿಯರೊಂದಿಗೆ ಚರ್ಚಿಸಿ ಅಧಿಕಾರಿಗಳಿಗೆ ಸಹಕರಿಸಬೇಕು. ಇಲ್ಲವಾದರೆ ಅಧಿಕಾರ ಬಳಸಿ ಕಾನೂನು ಬಾಹಿರ ಕಟ್ಟಡಗಳನ್ನು ಮುಲಾಜಿಲ್ಲದೇ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸ್ಮಾರ್ಟ್ ಸಿಟಿ ಎಂಡಿ ಶಶೀಧರ್ ಕುರೇರ್, ಕಾಂಟೋನ್ಮೆಂಟ್ ಬೋರ್ಡ್, ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಇದ್ದರು.