ಬೆಳಗಾವಿ: ಕಸ ನಿರ್ವಹಣೆಗೆ ಪ್ರತಿವರ್ಷ ಕೋಟಿ ಕೋಟಿ ರೂ. ಹಣ ಸುರಿದರೂ ಕುಂದಾನಗರಿಗೆ ಸ್ವಚ್ಛ ನಗರದ ಮನ್ನಣೆ ಮಾತ್ರ ಸಿಗುತ್ತಿಲ್ಲ. ಅಮಸರ್ಪಕ ತ್ಯಾಜ್ಯ ವಿಲೇವಾರಿಯೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗುತ್ತಿದ್ದು, ಸಾರ್ವಜನಿಕರ ತೆರಿಗೆ ಹಣ ಹೊಳೆಯಲ್ಲಿ ಹುಣಸೆ ತೊಳೆದಂತಾಗಿದೆ.
ಕೇಂದ್ರ ಸರ್ಕಾರದ ಸ್ಮಾರ್ಟ್‍ಸಿಟಿ ಹಾಗೂ ಅಮೃತ್ ಸಿಟಿಯಂತಹ ಯೋಜನೆಗೆ ಕುಂದಾನಗರಿ ಬೆಳಗಾವಿ ಒಳಪಟ್ಟಿದೆ. ಇದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಪ್ರತಿ ವರ್ಷ ನೂರಾರು ಕೋಟಿ ರೂ. ಹರಿದು ಬರುತ್ತಿದೆ. ಅಲ್ಲದೇ ನಗರೋತ್ಥಾನ ಯೋಜನೆಯಡಿಯೂ ನಗರಕ್ಕೆ ಪ್ರತಿವರ್ಷ ರಾಜ್ಯ ಸರ್ಕಾರದಿಂದ 125 ಕೋಟಿ ರೂ. ಬಿಡುಗಡೆ ಆಗುತ್ತದೆ. ಅಲ್ಲದೇ ನಗರ ವಾಸಿಗಳಿಂದ ಸಂಗ್ರಹವಾಗುವ ತೆರಿಗೆ ಹಣವೂ 60 ಕೋಟಿ ರೂ. ಮೀರುತ್ತದೆ. ಇಷ್ಟೆಲ್ಲ ಹಣದ ಹರಿವು ನಗರಕ್ಕಿದ್ದರೂ ಕಸ ನಿರ್ವಹಣೆ ವಿಚಾರದಲ್ಲಿ ಮಹಾನಗರ ಪಾಲಿಕೆಯಿಂದ ಸಮರ್ಪಕ ಕೆಲಸವಾಗುತ್ತಿಲ್ಲ. ಇದು ನಗರ ವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕೋಟಿ ಕೋಟಿ ಸುರಿದರೂ ಕುಂದಾನಗರಿಗೆ ಸಿಗುತ್ತಿಲ್ಲ ಸ್ವಚ್ಛ ನಗರದ ಮನ್ನಣೆ ಕಸ ವಿಲೇವಾರಿಗೆ 19 ಕೋಟಿ ವೆಚ್ಚ
58 ವಾರ್ಡ್‍ಗಳನ್ನು ಹೊಂದಿರುವ ಮಹಾನಗರ ಪಾಲಿಕೆ ತ್ಯಾಜ್ಯ ನಿರ್ವಹಣೆಗೆ ವರ್ಷಕ್ಕೆ ಬರೊಬ್ಬರಿಗೆ 19ಕೋಟಿ ರೂ. ವೆಚ್ಚ ಮಾಡಲಾಗುತ್ತದೆ. ನಗರದಲ್ಲಿ 11 ವಾರ್ಡ್‍ಗಳಲ್ಲಿ ಖಾಯಂ ಆಗಿ 164 ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನುಳಿದ 47 ವಾರ್ಡ್‍ಗಳಲ್ಲಿ 600ಕ್ಕೂ ಅಧಿಕ ಗುತ್ತಿಗೆ ಆಧಾರದ ಮೇಲೆ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಾನಗರ ಪಾಲಿಕೆಯಲ್ಲಿ ಪರಿಸರ ಇಂಜಿನಿಯರ್ ಆಗಿ ಮೂವರು ಅಧಿಕಾರಿಗಳು, ಆರೋಗ್ಯ ನಿರೀಕ್ಷಕರಾಗಿ 15 ಹಾಗೂ ತ್ಯಾಜ್ಯ ನಿರ್ವಹಣೆ ಉಸ್ತುವಾರಿ ನೋಡಿಕೊಳ್ಳಲು 30 ಸಿಬ್ಬಂದಿಯಿದ್ದಾರೆ.
ಬೆಳಗ್ಗೆ 6 ಗಂಟೆಯಿಂದ ತ್ಯಾಜ್ಯ ಸಂಗ್ರಹ ಕೆಲಸ ಆರಂಭವಾಗುತ್ತದೆ. ಮಾರ್ಕೆಟ್, ಹೋಟೆಲ್‍ಗಳ ತ್ಯಾಜ್ಯ ಸಂಗ್ರಹಕ್ಕೆ ವಿಶೇಷ ತಂಡ ನೇಮಿಸಲಾಗಿದೆ. ಇನ್ನು ನಗರದ ಪ್ರತಿ ಬಡಾವಣೆಗೆ ಡೋರ್-ಟು-ಡೋರ್ ಕಸ ಸಂಗ್ರಹಣೆ ಮಾಡಲಾಗುತ್ತದೆ. ಕೆಲವಡೆ ಮನೆಗಳಿಂದ ಕಸ ಸಂಗ್ರಹವಾಗದ ಕಾರಣ ಸ್ಥಳೀಯರು ಕಸವನ್ನು ಖಾಲಿ ಜಾಗದಲ್ಲಿ ಎಸೆಯುತ್ತಿದ್ದಾರೆ. ಈ ಕಾರಣಕ್ಕೆ ಬೆಳಗಾವಿಗೆ ಈವರೆಗೆ ಸ್ವಚ್ಛನಗರದ ಗರಿ ಸಿಕ್ಕಿಲ್ಲ.
ಜನ ಜಾಗೃತಿ ಕೊರತೆ
ಬೆಳಗಾವಿ ಸ್ಮಾರ್ಟ್‍ಸಿಟಿಯಾಗಿ ಪರಿವರ್ತನೆಗೊಳ್ಳುತ್ತಿದೆ. ಡೋರ್-ಟು-ಡೋರ್ ಕಸ ಸಂಗ್ರಹಣೆ ಜೊತೆಗೆ ಪ್ರತಿ ಕಾಲೋನಿಗೆ ಕಸ ಎಸೆಯಲು ಹೊಂಡ ಅಳವಡಿಕೆ ಮಾಡಿಲ್ಲ. ಹೀಗಾಗಿ ಮನೆ ಮನೆಗೆ ತೆರಳಿ ಕಸ ಸಂಗ್ರಹಣೆ ಸಮರ್ಪಕವಾಗಿ ನಡೆಯದ ಕಾರಣ ಜನರು ಕಸವನ್ನು ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಈ ಸಂಬಂಧ ಪಾಲಿಕೆಯಿಂದಲೂ ಜನರಲ್ಲಿ ಜಾಗೃತಿ ಮೂಡಿಸುವುದಾಗಲಿ ಅಥವಾ ಕಸ ಎಲ್ಲೆಂದರಲ್ಲಿ ಚೆಲ್ಲುವವರ ವಿರುದ್ಧ ಕಠಿಣ ಕ್ರಮವನ್ನು ಜರುಗಿಸುವ ಕಾರ್ಯಕ್ಕೆ ಮುಂದಾಗಿಲ್ಲ. ತ್ಯಾಜ್ಯ ನಿರ್ವಹಣೆಯ ಲೋಪಗಳಿಂದ ನಗರದ ನೈರ್ಮಲ್ಯತೆ ಸುಧಾರಣೆ ಕಾಣುತ್ತಿಲ್ಲ.
ಈ ಕುರಿತು ಈಟಿವಿ ಭಾರತ ಜೊತೆಗೆ ಮಾತನಾಡಿದ ಮಹಾನಗರ ಪಾಲಿಕೆ ಪರಿಸರ ವಿಭಾಗದ ಸಹಾಯಕ ಇಂಜಿನಿಯರ್ ಮಹಾಂತೇಶ ನರಸನ್ನವರ, ಮಹಾನಗರದಲ್ಲಿ ಕಸ ನಿರ್ವಹಣೆಗೆ ಪ್ರತಿವರ್ಷ 19 ಕೋಟಿ ವೆಚ್ಚಮಾಡಲಾಗುತ್ತಿದೆ. ಮನೆ ಮನೆಗೆ ತೆರಳಿ ಕಸ ಸಂಗ್ರಹಿಸಿದ ಬಳಿಕ ಈ ಕಸವನ್ನು ಬೆಳಗಾವಿ ತಾಲೂಕಿನ ತುರುಮುರಿ ಪ್ಲಾಂಟ್‍ಗೆ ಕಳಿಸಲಾಗುತ್ತೇವೆ. ಅಲ್ಲಿ ಕಸದಿಂದ ಗೊಬ್ಬರ ತಯಾರಿಸುತ್ತಾರೆ. ಕಸ ವಿಲೇವಾರಿಗೆ ಸಿಬ್ಬಂದಿ ಕೊರತೆ ಇರುವುದು ನಮಗೆ ಸಮಸ್ಯೆ ಆಗುತ್ತಿದೆ ಎಂದು ಹೇಳಿದರು.