ಕರ್ನಾಟಕ

karnataka

ETV Bharat / city

ಕೋವಿಡ್ ಮೂರನೇ ಅಲೆ ಎದುರಿಸಲು ಟೊಂಕಕಟ್ಟಿ ಸಜ್ಜಾಗಿ : ಕಾಂಗ್ರೆಸಿಗರಿಗೆ ಸಿದ್ದರಾಮಯ್ಯ ಕರೆ - ಕೊರೊನಾ ಪ್ಯಾಕೇಜ್

ಸರ್ಕಾರ ಘೋಷಿಸಿರುವ ಕೊರೊನಾ ಪ್ಯಾಕೇಜ್ ಜನರನ್ನು ತಲುಪಿಲ್ಲ. ಪರಿಹಾರ ಪಡೆಯುವ ಮಾರ್ಗ ತಿಳಿಯದೆ ಜನ ಪರದಾಡುತ್ತಿದ್ದಾರೆ. ಈ ಕುರಿತಾಗಿಯೂ ಶಾಸಕರು ಜನರಿಗೆ ನೆರವಾಗಬೇಕು. ಕೊರೊನಾ ಮೊದಲ ಮತ್ತು ಎರಡನೆ ಅಲೆಗಳು ದೇಶದ ಕೋಟ್ಯಂತರ ಜನರನ್ನು ಬಾಧಿಸಿ, ಲಕ್ಷಾಂತರ ಜನರನ್ನು ಕೊಂದು ಹಾಕಿವೆ. ಜತೆಗೆ ಎಲ್ಲ ದುಡಿಯುವ ವರ್ಗಗಳ ಬದುಕು ನೆಲ ಕಚ್ಚುವಂತೆ ಮಾಡಿವೆ. ಆದರೆ, ಸಂಕಷ್ಟಕ್ಕೆ ಒಳಗಾದವರ ಕೂಗು ಕೇಂದ್ರ, ರಾಜ್ಯ ಸರ್ಕಾರಕ್ಕೆ ಕೇಳಿಸುತ್ತಿಲ್ಲ..

be-ready-to-face-corona-third-wave-siddaramaiah-call
ವರ್ಚುವಲ್​ ವಿಡಿಯೋ ಸಭೆ

By

Published : Jun 26, 2021, 9:24 PM IST

ಬೆಂಗಳೂರು :ಕೋವಿಡ್ ಮೂರನೇ ಅಲೆಯ ಭೀತಿ ಶುರುವಾಗಿದೆ. ಮತ್ತೆ ಕೊರೊನಾದಿಂದಾಗಿ ಸಂಕಷ್ಟಕ್ಕೀಡಾಗುವ ಜನರ ನೆರವಿಗೆ ಟೊಂಕ ಕಟ್ಟಿ ನಿಲ್ಲುವಂತೆ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ಪಕ್ಷದ ಶಾಸಕರು, ಸಂಸದರು ಹಾಗೂ ಮುಖಂಡರಲ್ಲಿ ಮನವಿ ಮಾಡಿದ್ದಾರೆ.

ಕೊರೊನಾದಿಂದ ಸಂಕಷ್ಟಕ್ಕೆ ಒಳಗಾದವರನ್ನು ತಲುಪಲು ಕೈಗೊಳ್ಳಬೇಕಾದ ಅಭಿಯಾನದ ಬಗ್ಗೆ ಚರ್ಚಿಸಲು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ವರ್ಚುವಲ್​ ವಿಡಿಯೋ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೋವಿಡ್ ಒಂದು ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಜನರಿಗೆ ನೆರವಿನ ಹಸ್ತ ಚಾಚಿದ ಶಾಸಕರು, ಸಂಸದರು, ಮುಖಂಡರ ಕಾರ್ಯದ ಬಗ್ಗೆ ಸಿದ್ದರಾಮಯ್ಯ ಪ್ರಶಂಸೆ ವ್ಯಕ್ತಪಡಿಸಿದರು.

ಕೊರೊನಾದಿಂದ ಪಾರಾಗಲು ಲಸಿಕೆಯೇ ಮಾರ್ಗ. ಆದರೆ, ವ್ಯಾಕ್ಸಿನ್​​ ನೀಡುವ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಡಿಸೆಂಬರ್ ವೇಳೆಗೆ ಎಲ್ಲರಿಗೂ ಲಸಿಕೆ ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಕೆಲ ಜಿಲ್ಲೆಗಳಲ್ಲಿ ಲಸಿಕೆ ಸಿಗದೆ ಜನ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಆರಂಭಿಸಿದ ಲಸಿಕೆ ಅಭಿಯಾನ ನಿಂತಲ್ಲೇ ಇದೆ ಎಂದು ದೂರಿದರು.

ಕೋವಿಡ್ 3ನೇ ಅಲೆ ಎದುರಿಸಲು ಟೊಂಕಕಟ್ಟಿ ಸಜ್ಜಾಗಿ ಎಂದು ಕೈ ನಾಯಕರಿಗೆ ಸಿದ್ದರಾಮಯ್ಯ ಕರೆ

ನಮ್ಮ ಪಕ್ಷದ ಹಲವಾರು ಶಾಸಕರು ಜನರಿಗೆ ಉಚಿತವಾಗಿ ಲಸಿಕೆ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಅಗತ್ಯಕ್ಕೆ ಅನುಗುಣವಾಗಿ ಲಸಿಕೆ ನೀಡಿ ಜನರನ್ನು ಕೊರೊನಾ ಮುಕ್ತ ಮಾಡುವ ಕಾರ್ಯವನ್ನು ಸರ್ಕಾರ ಮಾಡಬೇಕು. ಈ ವಿಷಯದಲ್ಲಿ ಪಕ್ಷದ ವತಿಯಿಂದಲೂ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಎಐಸಿಸಿ ಸೂಚನೆ ಮೇರೆಗೆ ರಾಜ್ಯಾದ್ಯಂತ ಜನರನ್ನು ತಲುಪುವ ಅಭಿಯಾನವನ್ನು ಯಶಸ್ವಿಗೊಳಿಸಲು ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ಸಿದ್ದರಾಮಯ್ಯ ಅವರು ಮನವಿ ಮಾಡಿದರು.

ಪ್ಯಾಕೇಜ್ ಜನರನ್ನು ತಲುಪಿಲ್ಲ

ಸರ್ಕಾರ ಘೋಷಣೆ ಮಾಡಿರುವ ಕೊರೊನಾ ಪ್ಯಾಕೇಜ್ ಜನರನ್ನು ತಲುಪಿಲ್ಲ. ಪರಿಹಾರ ಪಡೆಯುವ ಮಾರ್ಗ ತಿಳಿಯದೆ ಜನ ಪರದಾಡುತ್ತಿದ್ದಾರೆ. ಈ ಕುರಿತಾಗಿಯೂ ಶಾಸಕರು ಜನರಿಗೆ ನೆರವಾಗಬೇಕು. ಕೊರೊನಾ ಮೊದಲ ಮತ್ತು ಎರಡನೆ ಅಲೆಗಳು ದೇಶದ ಕೋಟ್ಯಂತರ ಜನರನ್ನು ಬಾಧಿಸಿ, ಲಕ್ಷಾಂತರ ಜನರನ್ನು ಕೊಂದು ಹಾಕಿದೆ. ಜೊತೆಗೆ ಎಲ್ಲ ದುಡಿಯುವ ವರ್ಗಗಳ ಬದುಕು ನೆಲ ಕಚ್ಚುವಂತೆ ಮಾಡಿವೆ. ಆದರೆ, ಸಂಕಷ್ಟಕ್ಕೆ ಒಳಗಾದವರ ಕೂಗು ಕೇಂದ್ರ, ರಾಜ್ಯ ಸರ್ಕಾರಕ್ಕೆ ಕೇಳಿಸುತ್ತಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ಪರಿಹಾರ ಕಡಿಮೆ

ಕೊರೊನಾದಿಂದ ಮರಣ ಹೊಂದಿದವರ ಕುಟುಂಬಗಳಿಗೆ ಕೇವಲ ಒಂದು ಲಕ್ಷ ಪರಿಹಾರ ಘೋಷಿಸಲಾಗಿದೆ. ಅದನ್ನು 5 ಲಕ್ಷ ರೂ.ಗಳಿಗೆ ಏರಿಸುವಂತೆ ಸರ್ಕಾರವನ್ನು ಒತ್ತಾಯಿಸುವುದರ ಜೊತೆಗೆ ಪರಿಹಾರ ಎಲ್ಲರಿಗೂ ಸಿಗುವಂತೆ ಮಾಡಬೇಕಿದೆ. ಕೊರೊನಾ ಸಾವಿನ ಸಂಖ್ಯೆಯನ್ನೂ ಸರ್ಕಾರ ಮುಚ್ಚಿಡುತ್ತಿದ್ದು, ಸುಳ್ಳು ಅಂಕಿ-ಅಂಶ ತೋರಿಸುತ್ತಿದೆ. ಇದನ್ನು ಬಯಲಿಗೆಳೆಯುವ ಕೆಲಸವೂ ಆಗಬೇಕಿದೆ ಎಂದರು.

ಕೋವಿಡ್ ಮೂರನೇ ಅಲೆ ಕುರಿತಂತೆ ಸಭೆ ನಡೆಸಿದ್ದರ ಬಗ್ಗೆ ಮಾಹಿತಿ ನೀಡಿದ ಡಿ ಕೆ ಶಿವಕುಮಾರ್​​

ಮೂರು ಲಕ್ಷಕ್ಕೂ ಅಧಿಕ ಜನರ ಸತ್ತಿದ್ದಾರೆ

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಮಾತನಾಡಿ, ಜುಲೈ ತಿಂಗಳಲ್ಲಿ ಕೋವಿಡ್ ಸೋಂಕಿನಿಂದ ಮರಣ ಹೊಂದಿದವರ ಮನೆಗೆ ಭೇಟಿ ನೀಡುತ್ತೇವೆ. ಆ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡುತ್ತೇವೆ. ಸರ್ಕಾರ ಸೋಂಕಿತರ ಸಾವಿನ ಬಗ್ಗೆ ತಪ್ಪು ಮಾಹಿತಿ ಕೊಡುತ್ತಿದೆ. ನಮ್ಮ ಪ್ರಕಾರ ಮೂರು ಲಕ್ಷಕ್ಕೂ ಅಧಿಕ ಜನ ಸತ್ತಿದ್ದಾರೆ. ಆನ್​ಲೈನ್ ರಿಜಿಸ್ಟ್ರೆಷನ್‌ಗೆ ಸಮಸ್ಯೆಯಾದ್ರೆ ನಾವು ಅವರಿಗೆ ಸಹಾಯ ಮಾಡ್ತೀವಿ. ಸುರ್ಜೇವಾಲಾ ಸಭೆಗೆ ಬರಬೇಕಿತ್ತು. ಅವರು ಪ್ರಯಾಣದಲ್ಲಿದ್ದರೂ ನಮಗೆ ಮಾಹಿತಿ ನೀಡಿದರು ಎಂದರು.

ನಾಳೆ ಬೆಳಗ್ಗೆ ಚಾಮರಾಜನಗರ ಜಿಲ್ಲೆಗೆ ಹೋಗುತ್ತಿದ್ದೇನೆ. ಆಕ್ಸಿಜನ್ ಸಮಸ್ಯೆ ಇಂದ ಸತ್ತವರ ಮನೆಗೆ ಭೇಟಿ ಕೊಟ್ಟು ಸಾಂತ್ವನ ಹೇಳುತ್ತೇವೆ. ಸರ್ಕಾರದಿಂದ ಒಬ್ಬರು ಅಲ್ಲಿಗೆ ಹೋಗಿ ಕುಟುಂಬಗಳಿಗೆ ಸಾಂತ್ವನ ಹೇಳಿಲ್ಲ. ನನ್ನಿಂದಲೇ ಈ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿ ಎಂದು ಹೇಳಿದರು.

ABOUT THE AUTHOR

...view details