ಬೆಂಗಳೂರು: ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ)ಗೆ ಸೇರಿದ ಜಾಗವನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಿರುವ ಬಿಡಿಎ ಅಧಿಕಾರಿಗಳು ಇಂದು ನಗರದ ಹೆಚ್.ಬಿ.ಆರ್ ಬಡಾವಣೆಯಲ್ಲಿ ಸುಮಾರು 60 ಕೋಟಿ ರೂ. ಬೆಲೆ ಬಾಳುವ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಾರ್ಯಪಾಲಕ ಎಂಜಿನಿಯರ್ ಕುಮಾರ್ ನೇತೃತ್ವದ ಬಿಡಿಎ ಅಧಿಕಾರಿಗಳ ತಂಡವು ಈ ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಿದ್ದು, ಹೆಚ್.ಬಿ.ಆರ್ ಬಡಾವಣೆಯ ಕಾಚರಕನಹಳ್ಳಿಯ ಸರ್ವೆ ಸಂಖ್ಯೆ 194ರ 1 ಎಕರೆ 23 ಗುಂಟೆ ಜಮೀನನ್ನು ವಶಪಡಿಸಿಕೊಂಡಿದ್ದಾರೆ.
ಈ ಜಾಗವನ್ನು ಬಿಡಿಎ ಬಡಾವಣೆ ನಿರ್ಮಾಣ ಮಾಡುವ ಸಲುವಾಗಿ 1978ರಲ್ಲಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, 1985ರಲ್ಲಿ ಅಂತಿಮ ಅಧಿಸೂಚನೆಯನ್ನು ಹೊರಡಿಸಿತ್ತು. ಆದರೆ, ಭೂಮಾಲೀಕರು ಬಿಡಿಎ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಬಿಡಿಎ ಪರ ತೀರ್ಪು ನೀಡಿತ್ತು. ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ದಾವೆ ಹೂಡಿದರೂ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್ ಜಮೀನನ್ನು ವಶಕ್ಕೆ ತೆಗೆದುಕೊಳ್ಳುವಂತೆ ಆದೇಶ ನೀಡಿತ್ತು.
ತೀರ್ಪು ಬಂದು 30 ವರ್ಷವಾದರೂ ಜಮೀನಿನಲ್ಲಿ ಅನಧಿಕೃತವಾಗಿ ತಾತ್ಕಾಲಿಕ ಕಟ್ಟಡಗಳನ್ನು ನಿರ್ಮಾಣ ಮಾಡಿಕೊಳ್ಳಲಾಗಿತ್ತು. ಗುರುವಾರ ಬಿಡಿಎ ಅಧಿಕಾರಿಗಳು ಒಂದು ಕೈಗಾರಿಕಾ ಶೆಡ್, ಕಾರ್ಮಿಕರು ಉಳಿದುಕೊಳ್ಳಲು ನಿರ್ಮಾಣವಾಗಿದ್ದ 2 ಶೆಡ್‌ಗಳನ್ನು ಹಾಗೂ ಕಾಂಪೌಂಡನ್ನು ನೆಲಸಮ ಮಾಡಿ ಜಾಗವನ್ನು ವಶಪಡಿಸಿಕೊಂಡಿದ್ದಾರೆ. ಈ ಜಾಗದ ಪ್ರಸ್ತುತ ಮಾರುಕಟ್ಟೆ ಮೌಲ್ಯ 60 ಕೋಟಿ ರೂಪಾಯಿಗಳು ಎಂದು ಬಿಡಿಎ ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಬಿಡಿಎಗೆ ಸೇರಬೇಕಾಗಿದ್ದ ಅಮೂಲ್ಯವಾದ ಆಸ್ತಿಗಳನ್ನು ಒತ್ತುವರಿದಾರರು ಮತ್ತು ಭೂಗಳ್ಳರು ಲಪಟಾಯಿಸುವ ಪ್ರಕರಣಗಳಿಗೆ ತಿಲಾಂಜಲಿ ಹಾಕಲು ಸಂಕಲ್ಪ ಮಾಡಿದ್ದೇವೆ. ಈ ನಿಟ್ಟಿನಲ್ಲಿ ನ್ಯಾಯಾಲಯದ ಸ್ಪಷ್ಟ ಆದೇಶಗಳನ್ನು ಪಡೆದುಕೊಂಡ ಪ್ರಾಧಿಕಾರ ತನ್ನ ವಶಕ್ಕೆ ತೆಗೆದುಕೊಳ್ಳುತ್ತಿದ್ದೆ. ಒತ್ತುವರಿದಾರರು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರಿಂದ ಬಿಡಿಎ ಆಸ್ತಿಯನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಭೂ ಕಬಳಿಕೆದಾರರ ವಿರುದ್ಧ ಮುಂದುವರಿದ ಕಾರ್ಯಾಚರಣೆ: 40.57 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಬಿಡಿಎ