ಬೆಂಗಳೂರು:ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು 10 ರಿಂದ 15 ಸಾವಿರ ಕೋಟಿ ರೂ.ಕ್ರೋಢೀಕರಿಸಿ ನಗರದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಾಲುದಾರರಾಗಲಿದ್ದೇವೆ ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದರು.
ನಗರದಾದ್ಯಂತ ಬಿಡಿಎಗೆ ಸೇರಿದ ಸಾವಿರಾರು ಕೋಟಿ ರೂ.ಮೌಲ್ಯದ ಸ್ವತ್ತು ಇದೆ. ನಾನಾ ಕಾರಣಗಳಿಂದಾಗಿ ಇಂತಹ ಸ್ವತ್ತು ಪರರ ವಶದಲ್ಲಿದೆ. ಈ ಸ್ವತ್ತನ್ನು ಬಿಡಿಎ ವಶಪಡಿಸಿಕೊಂಡು ಸಾರ್ವಜನಿಕರ ಅನುಕೂಲಕ್ಕಾಗಿ ನಿವೇಶನಗಳನ್ನಾಗಿ ಮಾಡಿ ಹಂಚಿಕೆ ಮಾಡಲಾಗುತ್ತದೆ.
ಸಾವಿರಾರು ನಾಗರಿಕರಿಗೆ ನಿವೇಶನಗಳನ್ನು ನೀಡುವ ಮೂಲಕ ಪ್ರಾಧಿಕಾರ ಅವರಿಗೆ ಸ್ವಂತ ಮನೆಗಳನ್ನು ನಿರ್ಮಿಸಿಕೊಳ್ಳಲು ನೆರವಾಗಿದೆ. ಇನ್ನೂ ಸಾವಿರಾರು ಜನರಿಗೆ ನಿವೇಶನಗಳನ್ನು ಹಂಚಿಕೆ ಮಾಡುವ ಸಾಮರ್ಥ್ಯ ಸಂಸ್ಥೆಗಿದ್ದು, ಈ ಪ್ರಕ್ರಿಯೆಯನ್ನು ಹಂತಹಂತವಾಗಿ ಕೈಗೊಳ್ಳಲಾಗುತ್ತದೆ ಎಂದರು.
15 ಸಾವಿರ ಕೋಟಿ ಸಂಗ್ರಹದ ಗುರಿ:
ಬಿಡಿಎಗೆ ಸೇರಿದ ಸಾವಿರಾರು ನಿವೇಶನಗಳನ್ನು ಪತ್ತೆ ಮಾಡುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಇಂತಹ ನಿವೇಶನಗಳನ್ನು ಬಿಡಿಎ ಮರು ವಶಕ್ಕೆ ಪಡೆದುಕೊಂಡು ಹರಾಜು ಹಾಕುವ ಮೂಲಕ ಆರ್ಥಿಕ ಸಂಪನ್ಮೂಲವನ್ನು ಕ್ರೋಢೀಕರಿಸಲಿದೆ.
ಹೀಗೆ ಮುಂದಿನ ಒಂದು ವರ್ಷದ ಅವಧಿಯಲ್ಲಿ 10 ರಿಂದ 15 ಸಾವಿರ ಕೋಟಿ ರೂ.ಸಂಗ್ರಹ ಮಾಡುವ ನಿರೀಕ್ಷೆ ಇದೆ. ಈ ಮೂಲಕ ಸಂಸ್ಥೆಯನ್ನು ಆರ್ಥಿಕ ಸ್ವಾವಲಂಬಿಯನ್ನಾಗಿ ಮಾಡುವುದಲ್ಲದೇ, ಬೆಂಗಳೂರಿನ ಸರ್ವಾಂಗೀಣ ಅಭಿವೃದ್ಧಿಗೆ ಮತ್ತಷ್ಟು ಕೊಡುಗೆಯನ್ನು ನೀಡಲಿದೆ ಎಂದು ತಿಳಿಸಿದರು.
ನಾಗರಿಕ ಸ್ನೇಹಿ ಸಂಸ್ಥೆಯನ್ನಾಗಿ ಮಾಡುವ ಸಂಕಲ್ಪ:
ಕೆಲವು ಸಿಬ್ಬಂದಿಯಿಂದ ಇತ್ತೀಚಿನ ದಿನಗಳಲ್ಲಿ ಕೆಟ್ಟ ಹೆಸರು ಬಂದಿದೆ. ಇದನ್ನು ತೊಡೆದು ಹಾಕುವ ಶಕ್ತಿ ನಮ್ಮಲ್ಲಿದೆ. ಈ ಕಪ್ಪು ಚುಕ್ಕೆ ಬಂದಿದೆ ಎಂಬ ಕಾರಣಕ್ಕೆ ಯಾರೂ ಎದೆಗುಂದಬಾರದು. ಅದನ್ನು ಮೆಟ್ಟಿ ನಿಂತು ಸಂಸ್ಥೆಗೆ ಮತ್ತೆ ಒಳ್ಳೆಯ ಹೆಸರನ್ನು ತಂದು ನಾಗರಿಕ ಸ್ನೇಹಿ ಸಂಸ್ಥೆಯನ್ನಾಗಿ ಮಾಡುವ ಸಂಕಲ್ಪವನ್ನು ಮಾಡಬೇಕು ಎಂದು ಹೇಳಿದ್ದಾರೆ.
ಇನ್ನು ಇತರೆ ಇಲಾಖೆಗಳ ಸಿಬ್ಬಂದಿಗೆ ಇರುವ ರೀತಿಯಲ್ಲಿ ಬಿಡಿಎ ಸಿಬ್ಬಂದಿಗಾಗಿ ಒಂದು ಸುಸಜ್ಜಿತವಾದ ಕಲ್ಯಾಣ ಮಂಟಪವನ್ನು ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ. ಇದಕ್ಕಾಗಿ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಜಾಗ ಗುರುತಿಸುವ ಪ್ರಕ್ರಿಯೆ ಆರಂಭವಾಗಿದ್ದು, ಮುಂದಿನ ಒಂದೂವರೆ ವರ್ಷದಲ್ಲಿ ಕಲ್ಯಾಣ ಮಂಟಪ ನಿರ್ಮಾಣವಾಗಲಿದೆ ಎಂದು ವಿಶ್ವನಾಥ್ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ACB raids on BDA.. ಬಿಡಿಎ ಕಚೇರಿಗಳ ಮೇಲೆ ಮುಂದುವರೆದ ಎಸಿಬಿ ದಾಳಿ