ಕರ್ನಾಟಕ

karnataka

ETV Bharat / city

ಕೋವಿಡ್ ನಡುವೆ ಜೀವಪಡೆದ ಬಿಡಿಎ ಕಾರ್ಯ ಯೋಜನೆ.. ಟೌನ್​​​​​ಶಿಪ್ ನಿರ್ಮಾಣಕ್ಕೆ ಯೋಜನೆ - ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕೋನದಾಸಪುರದಲ್ಲಿ ಟೌನ್ ಶಿಪ್ ನಿರ್ಮಾಣ

4 ಬೆಡ್ ರೂಂಗಳ ಅಪಾರ್ಟ್​ಮೆಂಟ್​ಗಳು, ವಾಣಿಜ್ಯ ಸಂಕೀರ್ಣಗಳು ,ಮನೋರಂಜನಾ ಸಂಕೀರ್ಣ, ಜಿಮ್ ಸೇರಿದಂತೆ ಇನ್ನಿತರೆ ಜನೋಪಯೋಗಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು

BDA
BDA

By

Published : May 17, 2021, 9:53 PM IST

ಬೆಂಗಳೂರು:ಬೆಂಗಳೂರು ಪೂರ್ವ ತಾಲೂಕಿನ ಬಿದರಹಳ್ಳಿ ಹೋಬಳಿಯ ಕೋನದಾಸಪುರದಲ್ಲಿ ಬಹುಪಯೋಗಿ ಟೌನ್ ಶಿಪ್ ನಿರ್ಮಾಣ ಮಾಡಲು ಬಿಡಿಎ ನಿರ್ಧರಿಸಿದೆ.

ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಅಧ್ಯಕ್ಷತೆಯಲ್ಲಿ ನಡೆದ ಮಂಡಳಿ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಯೋಜನೆಯ ಕಾರ್ಯಗತಕ್ಕೆ ಅನುಮೋದನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಸಭೆಯ ನಂತರ ಈ ಬಗ್ಗೆ ವಿವರಣೆ ನೀಡಿದ ವಿಶ್ವನಾಥ್ , ಖಾಸಗಿ - ಸಾರ್ವಜನಿಕ ಸಹಭಾಗಿತ್ವದಲ್ಲಿ ಈ ಟೌನ್ ಶಿಪ್ ಅನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದ್ದು, ಸಾರ್ವಜನಿಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.

4 ಬೆಡ್ ರೂಂಗಳ ಅಪಾರ್ಟ್​ಮೆಂಟ್​ಗಳು, ವಾಣಿಜ್ಯ ಸಂಕೀರ್ಣಗಳು ,ಮನೋರಂಜನಾ ಸಂಕೀರ್ಣ, ಜಿಮ್ ಸೇರಿದಂತೆ ಇನ್ನಿತರ ಜನೋಪಯೋಗಿ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ಮಾಹಿತಿ ನೀಡಿದರು. ಸರ್ಕಾರದಿಂದ ಅನುಮೋದನೆ ಬಂದ ತಕ್ಷಣ ಟೆಂಡರ್ ಪ್ರಕ್ರಿಯೆ ಕೈಗೊಂಡು ಯೋಜನೆ ಕಾಮಗಾರಿ ಆರಂಭಿಸಲಾಗುತ್ತದೆ, ಖಾಸಗಿ ಟೌನ್​​ಶಿಪ್​ಗೆ ಸರಿ ಸಮನಾದ ಸೌಲಭ್ಯಗಳನ್ನು ಇಲ್ಲಿ ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು. ಇದೇ ವೇಳೆ, ಬಿಡಿಎ 2021-22 ನೇ ಸಾಲಿನಲ್ಲಿ 2252 ಕೋಟಿ ರೂಪಾಯಿಗಳ ಬಜೆಟ್​ಗೂ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ ಎಂದರು.

ಹರಾಜು ಮೂಲಕ ನಿವೇಶನ ಮಾರಾಟ

ಬಿಡಿಎ ರಚಿಸಿರುವ 64 ಬಡಾವಣೆಗಳ ಕುರಿತು ಇತ್ತೀಚೆಗೆ ಲ್ಯಾಂಡ್ ಆಡಿಟ್ ನಡೆಸಲಾಗಿದ್ದು, ಇದರಲ್ಲಿ 357 ಎಕರೆಯಷ್ಟು ಜಮೀನು ಹಂಚಿಕೆಯಾಗದೇ ಉಳಿದಿರುವುದು ಕಂಡು ಬಂದಿದೆ. ಈ ಭೂಮಿಯನ್ನು ಹರಾಜು ಮೂಲಕ ಮಾರಾಟ ಮಾಡಲು ಸಭೆಯಲ್ಲಿ ಅನುಮೋದನೆ ನೀಡಲಾಯಿತು ಎಂದರು.

ಪೆರಿಫರೆಲ್ ರಿಂಗ್ ರಸ್ತೆ ಯೋಜನೆಗೆ ಅನುಮೋದನೆ

ಬಹುನಿರೀಕ್ಷಿತ ಬೆಂಗಳೂರು ಪೆರಿಫರೆಲ್ ರಿಂಗ್ ರಸ್ತೆಯನ್ನು ನಿರ್ಮಾಣ ಮಾಡಲು ಬಿಡಿಎ ನೀಲನಕ್ಷೆ ರೂಪಿಸಿದೆ. ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ದೇಶ ವಿದೇಶಗಳ ಹಲವು ಕಂಪನಿಗಳು ಆಸಕ್ತಿ ತೋರಿರುವ ಹಿನ್ನೆಲೆಯಲ್ಲಿ ಜಾಗತಿಕ ಟೆಂಡರ್ ಕರೆಯಲು ಅನುಮತಿ ಕೋರಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ವಿಶ್ವನಾಥ್ ತಿಳಿಸಿದರು.

ಬಿಡಿಎ ರಚಿಸಿರುವ ಹಳೆಯ ಬಡಾವಣೆಗಳಲ್ಲಿ ಒಂದಾಗಿರುವ ಬನಶಂಕರಿ ಬಡಾವಣೆಯಲ್ಲಿರುವ 100 ಮತ್ತು 80 ಅಡಿ ರಸ್ತೆಗಳ ಇಕ್ಕೆಲಗಳಲ್ಲಿ ಇರುವ ವಿದ್ಯುತ್ ಬೀದಿ ದೀಪ ಕಂಬಗಳನ್ನು ಮಧ್ಯಭಾಗಕ್ಕೆ ಸ್ಥಳಾಂತರ ಮಾಡಿ ಹೊಸದಾಗಿ ಎಲ್ಇಡಿ ದೀಪಗಳನ್ನು ಅಳವಡಿಸುವುದು ಮತ್ತು ಪ್ರಮುಖ ವೃತ್ತಗಳಲ್ಲಿ ಹೈಮಾಸ್ಟ್ ಕಂಬ ಮತ್ತು ದೀಪಗಳನ್ನು ಅಳವಡಿಸಲು 2.75 ಕೋಟಿ ರೂಪಾಯಿ ಕಾಮಗಾರಿ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಬೆಂಗಳೂರು ಉತ್ತರ ತಾಲೂಕಿನ ಆಲೂರು ಗ್ರಾಮದಲ್ಲಿ ನಿರ್ಮಾಣ ಮಾಡಲಾಗಿರುವ 1- ಬಿಎಚ್​​​ಕೆ ವಸತಿ ಸಮುಚ್ಚಯದ ಸುತ್ತಮುತ್ತ ಕಾಂಪೌಂಡ್ ನಿರ್ಮಾಣ ಮತ್ತು ಹತ್ತಿರದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲು ರಸ್ತೆಗಳ ನಿರ್ಮಾಣಕ್ಕೆ ಸುಮಾರು 1 ಕೋಟಿ ರೂಪಾಯಿ ಮಂಜೂರು ಮಾಡಲು ಸಭೆ ಒಪ್ಪಿಗೆ ನೀಡಿತು ಎಂದು ಅವರು ತಿಳಿಸಿದರು.

ಪ್ರಾಧಿಕಾರದ ಎಲ್ಲ ಕಾರ್ಯಚಟುವಟಿಕೆಗಳನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸುವ ತಂತ್ರಾಂಶವನ್ನು ಅಭಿವೃದ್ಧಿಪಡಿಸಲು ಟೆಂಡರ್ ಕರೆಯಲು ನಿರ್ಧರಿಸಲಾಗಿದ್ದು, ಖಾಲಿ ಇರುವ ಹುದ್ದೆಗಳನ್ನು ಕೋವಿಡ್-19 ತಹಬದಿಗೆ ಬಂದ ನಂತರ ನೇಮಕಾತಿ ಮಾಡಿಕೊಳ್ಳುವ ಬಗ್ಗೆ ಚರ್ಚೆ‌ ನಡೆಸಲಾಗಿದೆ.

ಈ ವರ್ಚುಯಲ್ ಸಭೆಯಲ್ಲಿ ಬಿಡಿಎ ಆಯುಕ್ತ ಎಂ.ಬಿ.ರಾಜೇಶ್ ಗೌಡ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಬೆಂಗಳೂರು ಜಲಮಂಡಳಿ ಅಧ್ಯಕ್ಷ ಜಯರಾಂ, ಬಿಡಿಎ ಕಾರ್ಯದರ್ಶಿ ಡಾ.ವಾಸಂತಿ ಅಮರ್, ಉಪ ಆಯುಕ್ತರಾದ ಡಾ.ಸೌಜನ್ಯ ಸೇರಿದಂತೆ ಹಲವರು ಭಾಗಿಯಾಗಿದ್ದರು.

ABOUT THE AUTHOR

...view details