ಬೆಂಗಳೂರು:ಬಿಬಿಎಂಪಿಯು ಪಾರದರ್ಶಕ ಆಡಳಿತ ನೀಡುವ ನಿಟ್ಟಿನಲ್ಲಿ ಬಿಬಿಎಂಪಿ ಅನುದಾನದಡಿ ಜೂನ್ 2015ರಿಂದ ಈವರೆಗೂ ನಡೆಸಿರುವ ಕಾಮಗಾರಿ, ಯೋಜನೆಗಳ ಮಾಹಿತಿಯನ್ನು ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಜನರಿಗೂ ಈ ಬಗ್ಗೆ ಅನಿಸಿಕೆ ನೀಡಲು ಅವಕಾಶ ನೀಡಲಾಗಿದೆ.
ಜನರ ತೆರಿಗೆ ಹಣದಲ್ಲಿ ಮಾಡುವ ಪ್ರತಿಯೊಂದೂ ಕಾಮಗಾರಿಗಳು ಜನರ ಗಮನಕ್ಕೆ ತರಬೇಕು. ಹೀಗಾಗಿ ಕಾಮಗಾರಿಗಳ ಬಿಲ್, ಯೋಜನೆ, ಮೊದಲಾದ ವಿವರಗಳನ್ನು ಎಲ್ಲರಿಗೂ ಲಭ್ಯ ಇರುವ ರೀತಿ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ. ವಾರ್ಡ್ ನಂಬರ್ ಅಥವಾ ಹೆಸರು ಹಾಕಿದ್ರೆ ಕಳೆದ ಐದು ವರ್ಷದ ಯೋಜನೆಗಳ ವಿವರ ಲಭ್ಯವಾಗಲಿದೆ.
ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ನಾಗರಿಕರ ತೆರಿಗೆ ಹಣದಿಂದ ಪಾಲಿಕೆ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳುವ ಕಾಮಗಾರಿಗಳ ಬಗ್ಗೆ, ಪಾಲಿಕೆ ವತಿಯಿಂದ ಏನೇನು ಕೆಲಸ ಮಾಡಲಾಗುತ್ತಿದೆ, ಎಲ್ಲೆಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ, ಎಷ್ಟು ವ್ಯಯಿಸಲಾಗುತ್ತಿದೆ ಹಾಗೂ ಇನ್ನಿತರೆ ಮಾಹಿತಿಗಳ ಸಂಪೂರ್ಣ ಮಾಹಿತಿಯನ್ನು ಪ್ರತಿಯೊಬ್ಬ ನಾಗರಿಕರೂ ತಿಳಿದುಕೊಳ್ಳಬೇಕು. ಪಾಲಿಕೆಯ ಜಾಲತಾಣ bbmp.gov.inಗೆ ಭೇಟಿ ನೀಡಿ ‘ನಾಗರಿಕ ವಲಯ’ದಲ್ಲಿ ‘ನಾಗರಿಕರ ವೀಕ್ಷಣೆ’ಗೆ ಭೇಟಿ ನೀಡಿ ಕಾಮಗಾರಿಗಳ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ ಎಂದರು.
ಕಾಮಗಾರಿಗಳ ವಿವರ, ಬಿಲ್, ಜಾಬ್ ಕೋಡ್, ಎಸ್ಟಿಮೇಟ್ಸ್, ವರ್ಕ್ ಆರ್ಡರ್, ಮೆಸರ್‌ಮೆಂಟ್ ಬುಕ್, ಕಾಮಗಾರಿ ಹೆಸರು, ಕಾಮಗಾರಿ ನಡೆದಿರುವ ಛಾಯಾಚಿತ್ರಗಳು ಸೇರಿದಂತೆ ಎಲ್ಲಾ ಸಂಪೂರ್ಣ ಮಾಹಿತಿಯಿರಲಿದೆ. ಆರಂಭದಲ್ಲಿ ಬಿಬಿಎಂಪಿ ಅನುದಾನದ ವಿವರ ಮಾತ್ರ ಇರಲಿದ್ದು, ನಂತರ ರಾಜ್ಯ, ಕೇಂದ್ರ ಸರ್ಕಾರದ ಅನುದಾನಗಳ ಕಾಮಗಾರಿ ವಿವರವನ್ನೂ ಹಾಕಲಾಗುವುದು ಎಂದರು.
ಆಡಳಿತಗಾರರಾದ ಗೌರವ್ ಗುಪ್ತ ಮಾತನಾಡಿ, ಬೆಂಗಳೂರು ಇಡೀ ರಾಷ್ಟ್ರದ ಟೆಕ್ನಾಲಜಿ ಹಬ್ ಆಗಿದೆ. ಪಾಲಿಕೆ ಯಾವ ಉದ್ದೇಶಕ್ಕಾಗಿ ಹಣ ಖರ್ಚು ಮಾಡ್ತಿದೆ ಎಂಬ ವಿವರ ಜನಸಾಮಾನ್ಯರಿಗೆ ನೀಡಬೇಕು. ಕಾಮಗಾರಿ ಬಿಲ್, ಯೋಜನೆಗಳ ವಿವರ ಸಾರ್ವಜನಿಕರಿಗೆ ನೀಡಲಿದ್ದೇವೆ. ಪಾಲಿಕೆಯಿಂದ ಒದಗಿಸುವ ಎಲ್ಲಾ ಸೇವೆಗಳ ಬಗ್ಗೆ ಆನ್ಲೈನ್ ಮೂಲಕ ಜನರ ಮುಂದಿಡುತ್ತೇವೆ ಎಂದರು.