ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಯಾವುದೇ ಮಾಹಿತಿ ನೀಡದೆ ತುರ್ತಾಗಿ ತಡರಾತ್ರಿ 11:24ಕ್ಕೆ ಆಯವ್ಯಯ ಮಂಡನೆ ಮಾಡಿದೆ. 2022-23ನೇ ಸಾಲಿನ ಬಿಬಿಎಂಪಿ ಆಯವ್ಯಯವನ್ನು ಬಿಬಿಎಂಪಿ ವೆಬ್ಸೈಟ್ನ ಮುಖಪುಟದಲ್ಲಿ ಅಪ್ಲೋಡ್ ಮಾಡಲಾಗಿದೆ ಎಂದು ವಿಶೇಷ ಆಯುಕ್ತೆ (ಹಣಕಾಸು) ತುಳಸಿ ಮದ್ದಿನೇನಿ ತಿಳಿಸಿದ್ದಾರೆ.
10,480.92 ಕೋಟಿ ರೂ ಮೊತ್ತದ ಬಜೆಟ್ ಇದಾಗಿದ್ದು, ಒಟ್ಟಾರೆ ಶೇಕಡಾ 76ರಷ್ಟು ಅನುದಾನವನ್ನು ನಿರ್ವಹಣಾ ಶುಲ್ಕ ಹಾಗೂ ಕಾಮಗಾರಿಗಳಿಗೆ ಮೀಸಲಿಡಲಾಗಿದೆ. ವಿಶೇಷ ಚೇತನ ವ್ಯಕ್ತಿಗಳ ಅಭಿವೃದ್ಧಿಗೆ 370 ಕೋಟಿ ಮೀಸಲು, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ 346 ಕೋಟಿ ಮೀಸಲು ಹಾಗೂ ಕಲ್ಯಾಣ ಕಾರ್ಯಕ್ರಮಕ್ಕೆ 428 ಕೋಟಿ ಮೀಸಲು, ಘನತ್ಯಾಜ್ಯ ನಿರ್ವಹಣೆಗೆ 1,469 ಕೋಟಿ ಮೀಸಲಿಟ್ಟಿದ್ದು, ಆರೋಗ್ಯ ವಲಯಕ್ಕೆ 75 ಕೋಟಿ ಮೀಸಲಿಡಲಾಗಿದೆ.
ಬಿಬಿಎಂಪಿ ಬಜೆಟ್ ಗಾತ್ರದ ಮಾಹಿತಿ ಜನಪ್ರತಿನಿಧಿಗಳ, ಸಚಿವರ ಅಭಿಪ್ರಾಯ ಸಂಗ್ರಹಿಸಲು ಸೋತ ಪಾಲಿಕೆ: ಮಧ್ಯರಾತ್ರಿಯಲ್ಲಿ ಬಜೆಟ್ ಮಾಹಿತಿ ಕೊಟ್ಟ ಪಾಲಿಕೆಯು ಬಜೆಟ್ ಮಂಡನೆ ವಿಚಾರದಲ್ಲಿ ಜನಪ್ರತಿನಿಧಿಗಳ, ಸಚಿವರ ಅಭಿಪ್ರಾಯ ಸಂಗ್ರಹಿಸಲು ಸೋತಿದೆ. ತರಾತುರಿಯಲ್ಲಿ ಹಲವು ಯೋಜನೆಗಳ ಸೇರ್ಪಡೆಗೊಳಿಸಿ ಬಜೆಟ್ ಮಂಡನೆ ಮಾಡಿದೆ. ಮೂಲಗಳ ಪ್ರಕಾರ, ಆಡಳಿತಾಧಿಕಾರಿ ರಾಕೇಶ್ ಸಿಂಗ್, ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಬಜೆಟ್ ಮಂಡನೆಗೆ ಮುನ್ನ ಮ್ಯಾರಥಾನ್ ಮೀಟಿಂಗ್ ನಡೆಸಿದ್ದಾರೆ.
ಬಿಬಿಎಂಪಿ ಬಜೆಟ್ ಗಾತ್ರದ ಮಾಹಿತಿ ನಿನ್ನೆ ಸಿಎಂ ಸಹ ಪಾಲಿಕೆ ಅಧಿಕಾರಿಗಳ ಜೊತೆ ಕಡೆಯ ಸುತ್ತಿನ ಸಭೆ ನಡೆಸಿದ್ದಾರೆ. ಇದಾದ ಬಳಿಕ ಬಿಬಿಎಂಪಿ, ಬಜೆಟ್ ಮಂಡನೆಗೆ ಮುಂದಾಗಿದೆ. ಜನಪ್ರತಿನಿಧಿಗಳು ಇಲ್ಲದೇ ಹೋದಾಗ ಅಧಿಕಾರಿಗಳು ರಾತ್ರಿ ವೇಳೆ ಬಜೆಟ್ ಮಂಡಿಸಿರುವುದು ಸಾಕಷ್ಟು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಮಾರ್ಚ್ 30ರಂದು ಬಜೆಟ್ ಮಂಡನೆ ಪ್ಲಾನ್ ನಡೆದಿತ್ತು. ಆದ್ರೆ, ಎಲೆಕ್ಷನ್ ಬಜೆಟ್ ಎಂಬ ಕಾರಣಕ್ಕೆ ಜನಪ್ರತಿನಿಧಿಗಳ ಅಭಿಪ್ರಾಯ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ:19 ಕೆಜಿ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ₹250 ಏರಿಕೆ