ಬೆಂಗಳೂರು: ಬಿಬಿಎಂಪಿ ಬಜೆಟ್ ಮಂಡನೆ ಯಾವಾಗ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪಾಲಿಕೆಯ ವಿಶೇಷ ಆಯುಕ್ತರು ಬಜೆಟ್ ಮಂಡನೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ನಾಳೆ ಮಧ್ಯಾಹ್ನ 3 ಗಂಟೆಗೆ ಆಯುಕ್ತರು ರಾಜಧಾನಿಯ ಅಭಿವೃದ್ಧಿಯ ಆಯವ್ಯಯಗಳ ಪಟ್ಟಿ ಮಂಡಿಸಲಿದ್ದಾರೆ.
ಬೆಂಗಳೂರು ಮಹಾನಗರ ಉಸ್ತುವಾರಿಯೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಜೆಟ್‍ಗೆ ಒಪ್ಪಿಗೆ ಸೂಚಿಸಿದ್ದು, 2022-23ನೇ ಸಾಲಿನ ಬಜೆಟ್‌ಗೆ ಬಿಬಿಎಂಪಿ ಅಗತ್ಯ ತಯಾರಿ ಮಾಡಿಕೊಂಡಿದೆ. ಬಜೆಟ್ ಅನ್ನು ಮಲ್ಲೇಶ್ವರಂನಲ್ಲಿರುವ ಐಪಿಪಿ ಸೆಂಟರ್‌ನಲ್ಲಿ ಮಂಡಿಸಲು ತಯಾರಿ ನಡೆದಿದೆ. ಜನಪ್ರತಿನಿಧಿಗಳಿಲ್ಲದೆ ಎರಡನೇ ಬಾರಿ ಪಾಲಿಕೆಯ ಆಡಳಿತಾಧಿಕಾರಿ ನೇತೃತ್ವದಲ್ಲಿ ಬಜೆಟ್ ಮಂಡನೆಯಾಗುತ್ತಿದೆ.
ಕಳೆದ ವರ್ಷದಂತೆ ಈ ವರ್ಷವೂ ಪೇಪರ್‌ರಹಿತ ಬಜೆಟ್ ಮಂಡನೆಯಾಗಲಿದೆ. ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ ಬಜೆಟ್ ಮಂಡಿಸುವರು. 9 ಸಾವಿರ ಕೋಟಿ ರೂ.ಗೆ ಮೀರದಂತೆ ವಾಸ್ತವಿಕ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಪ್ರಗತಿಯಲ್ಲಿರುವ ಹಾಗೂ ಬಾಕಿ ಇರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ಆದ್ಯತೆ ನೀಡುವುದು. ಆಸ್ತಿ ತೆರಿಗೆ ಸಂಗ್ರಹ ಗುರಿ ಐದು ಸಾವಿರ ಕೋಟಿ ರೂ.ಗೆ ಹೆಚ್ಚಳ ಮಾಡುವ ಚಿಂತನೆ ಇದೆ.
ಇದನ್ನೂ ಓದಿ:ಗೋಶಾಲೆ ನಿರ್ಮಾಣ ಕುರಿತು ಪ್ರಶ್ನಿಸಿದರೆ ಕೇವಲ ಕಾಗದ ತೋರಿಸುತ್ತೀರಿ: ಹೈಕೋರ್ಟ್ ಅಸಮಾಧಾನ!
ಬಿ ಖಾತೆಯ ಆಸ್ತಿಗಳಿಗೆ ಎ ಖಾತೆ ಹಂಚಿಕೆಯ ಕ್ರಮ, ರಸ್ತೆ, ಕೆರೆ ಹಾಗೂ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ, ಅಂಗವಿಕಲರಿಗೆ ಈ ಬಾರಿಯ ಬಜೆಟ್‍ನಲ್ಲಿ ಬಂಪರ್ ಕೊಡುಗೆ ನಿರೀಕ್ಷಿಸಲಾಗಿದೆ. ಮೂಲಭೂತ ಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಬಜೆಟ್‍ನಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಪಾದಚಾರಿಗಳಿಗೆ ಹಲವು ಹೊಸ ಕಾರ್ಯಕ್ರಮ ಘೋಷಿಸುವ ಸಾಧ್ಯತೆಯಿದೆ. ಜೊತೆಗೆ, ಬೀದಿ ವ್ಯಾಪಾರಿಗಳು ಶುಲ್ಕ ಪಾವತಿ ಮಾಡುವ ವ್ಯವಸ್ಥೆ ಜಾರಿಯಾಗಲಿದೆ ಎಂದು ಮೂಲಗಳು ತಿಳಿಸಿವೆ.