ಕರ್ನಾಟಕ

karnataka

ETV Bharat / city

ಲಾಕ್​ಡೌನ್​ ಮುಗಿದಿಲ್ಲ ಆದ್ರೂ ಕಡಿಮೆ ಕಾರ್ಮಿಕರಿಂದಲೇ ಬಿಬಿಎಂಪಿ ಚುರುಕಿನ ಕಾಮಗಾರಿ - ಕೋವಿಡ್ 19

ಲಾಕ್​ಡೌನ್ ಸ್ವಲ್ಪ ಸಡಿಲಿಕೆಯಾಗುತ್ತಿದ್ದಂತೆ ಕೂಡಾ ಬಿಬಿಎಂಪಿ ಹಲವೆಡೆ ಚುರುಕುಗೊಳಿಸಿದೆ. ಕಳೆದ ಒಂದು ವಾರದಿಂದ ಕಾಮಗಾರಿಗಳು ಆರಂಭವಾಗಿದ್ದು, ಗುತ್ತಿಗೆದಾರರಿಗೆ ಕಾರ್ಮಿಕರ ಕೊರತೆ ಎದುರಾಗಿದೆ.

bbmp works
ಬಿಬಿಎಂಪಿ

By

Published : May 14, 2020, 1:36 PM IST

ಬೆಂಗಳೂರು: ಲಾಕ್​​ಡೌನ್​ನಿಂದ ಸ್ಥಗಿತವಾಗಿದ್ದ ಬಿಬಿಎಂಪಿ ಕಾಮಗಾರಿಗಳು ನಿಧಾನಕ್ಕೆ ಆರಂಭವಾಗಿವೆ. ವಿಸ್ತರಣೆಯಾದ ಲಾಕ್​ಡೌನ್​ನಿಂದಾಗಿ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಇತ್ತು. ಆದರೆ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಅನುಮತಿ ನೀಡಿದ ಹಿನ್ನೆಲೆ ಕಳೆದ ಒಂದು ವಾರದಿಂದ ಕೆಲಸಗಳು ಆರಂಭವಾಗಿವೆ. ಆದರೆ ಕೆಲವೆಡೆ ಗುತ್ತಿಗೆದಾರರಿಗೆ ಕಾರ್ಮಿಕರ ಕೊರತೆಯಾಗಿದ್ದು, ಶೇಕಡ 30ರಷ್ಟು ಕಾರ್ಮಿಕರಿಂದ ಕೆಲಸ ನಿರ್ವಹಿಸುತ್ತಿದ್ದಾರೆ.

ಬಿಬಿಎಂಪಿ

ಈ ಬಾರಿ ಮಳೆಗಾಲದಲ್ಲಿ ಪ್ರವಾಹ ಭೀತಿ ಇಲ್ಲ

ಬೆಂಗಳೂರಿನ 222 ಪ್ರದೇಶಗಳನ್ನು ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಜಾಗಗಳೆಂದು ಗುರುತಿಸಲಾಗಿದ್ದು, ಈ ಎಲ್ಲಾ ಪ್ರದೇಶಗಳ ಮಳೆ ನೀರಿನ ಕಾಲುವೆಗಳ ಹೂಳು ತೆಗೆಯಲಾಗುತ್ತಿದೆ. ಕೋರಮಂಗಲದಲ್ಲಿ ಜಲಮಂಡಳಿ ಕೆಲಸ ನಿರ್ವಹಿಸುತ್ತಿರುವುದರಿಂದ ಅಲ್ಲಿ ಕಾಮಗಾರಿ ನಡೆದಿಲ್ಲ. ಉಳಿದೆಲ್ಲೆಡೆ ಸಲಕರಣೆಗಳೊಂದಿಗೆ ಕೆಲಸ ನಡೆಯುತ್ತಿದೆ. ಕಳೆದ ಬಾರಿ 25 ಕೋಟಿ ರೂ. ಅನುದಾನ ಕೊಟ್ಟಿದ್ದಾರೆ, ಈ ಬಾರಿ 25 ಕೋಟಿ ರೂಪಾಯಿ ಅನುದಾನ ಮಳೆನೀರುಗಾಲುವೆ ಅಭಿವೃದ್ಧಿಗೆ ಮೀಸಲಿಡಲಾಗಿದೆ ಎಂದು ಮುಖ್ಯ ಇಂಜಿನಿಯರ್ ಪ್ರಹ್ಲಾದ್ ಈಟಿವಿ ಭಾರತ್​​ಗೆ ತಿಳಿಸಿದರು. ಪ್ರತೀ ಬಾರಿ ಮನೆಗಳಿಗೆ ನೀರು ನುಗ್ಗುವ ಹೆಚ್​ಎಸ್​ಆರ್ ಲೇಔಟ್​​ನಲ್ಲೂ ಉತ್ತಮ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ. ಮೂರು ವರ್ಷಕ್ಕೆ ಮೊದಲೇ ಟೆಂಡರ್ ಆಗಿರುವುದರಿಂದ ಲಾಕ್​ಡೌನ್ ಇದ್ರೂ ಕಾಮಗಾರಿಗೆ ಸಮಸ್ಯೆಯಾಗಿಲ್ಲ ಎಂದು ತಿಳಿಸಿದರು.

ಮೇಲ್ಸೇತುವೆ, ವೈಟ್ ಟಾಪಿಂಗ್ ಕಾಮಗಾರಿಗಳಿಗೆ ಚಾಲನೆ

ಆರಂಭದಲ್ಲಿ ಲಾಕ್​ಡೌನ್ ವೇಳೆ ಅರ್ಧಕ್ಕೇ ಸ್ಥಗಿತಗೊಂಡ ವೈಟ್ ಟಾಪಿಂಗ್, ಮೇಲ್ಸೇತುವೆ ಕಾಮಗಾರಿಗಳು ಈಗ ಚಾಲನೆಗೊಂಡಿವೆ. ಈ ಬಗ್ಗೆ ಮಾಹಿತಿ ನೀಡಿದ ಯೋಜನಾ ವಿಭಾಗದ ಚೀಫ್ ಇಂಜಿನಿಯರ್ ಎನ್ ರಮೇಶ್ ''ಸೋನಿ ವರ್ಲ್ಡ್ ಜಂಕ್ಷನ್ ಹಾಗೂ ಕಾರ್ಡ್ ರಸ್ತೆಯ ಮೇಲ್ಸೇತುವೆ ಆರಂಭಗೊಂಡಿದೆ. ಎರಡು ಮೂರು ಕಡೆ ವೈಟ್ ಟಾಪಿಂಗ್ ನ ಫುಟ್ ಪಾತ್ ಕೆಲಸಗಳು ನಡೆಯುತ್ತಿವೆ'' ಎಂದರು. ಈ ಎಲ್ಲಾ ಕಾಮಗಾರಿಗಳು ಹಳೆಯ ಯೋಜನೆಗಳು ಆಗಿರುವುದರಿಂದ ಪಾಲಿಕೆ ಬಜೆಟ್ ತಡವಾದ್ರೂ ಕಾಮಗಾರಿಗೆ ಯಾವುದೇ ಸಮಸ್ಯೆಯಾಗಿಲ್ಲ ಎಂದರು. ಅಲ್ಲದೆ ಎಲ್ಲಾ ಗುತ್ತಿಗೆದಾರರ ಬಳಿ ಕಾರ್ಮಿಕರು ಇದ್ದಿದ್ದರಿಂದ, ಕಾಮಗಾರಿ ಆರಂಭಿಸಲು ಕಾರ್ಮಿಕರ ಕೊರತೆಯಾಗಿಲ್ಲ ಎಂದರು.

ವಾರ್ಡ್ ಕಾಮಗಾರಿಗಳಿಗೆ ಕಾರ್ಮಿಕರ ಕೊರತೆ

ಬಿಬಿಎಂಪಿಯ ಯೋಜನಾ ವಿಭಾಗ, ಮಳೆ ನೀರಿನ ಕಾಲುವೆ ಕಾಮಗಾರಿಗಳು ಆರಂಭವಾಗಿವೆ. ಆದರೆ ವಾರ್ಡ್ ಮಟ್ಟದಲ್ಲಿ ನಡೆಯಬೇಕಾದ ಹೊಸ ಯೋಜನೆಗಳಿಗೆ ಇನ್ನೂ ಚಾಲನೆ ಸಿಕ್ಕಿಲ್ಲ. ನಗರೋತ್ಥಾನ ಯೋಜನೆಯಡಿಯ ಕೆಲಸಗಳು ಆರಂಭಗೊಂಡಿಲ್ಲ. ರಸ್ತೆ ಮೂಲಭೂತ ಸೌಕರ್ಯ ವಿಭಾಗದಡಿ, ಈಗಾಗಲೇ ಅರ್ಧದಲ್ಲಿ ನಿಲ್ಲಿಸಿದ್ದ ಕಾಮಗಾರಿಗಳಿಗೆ ಚಾಲನೆ ದೊರೆತಿದೆ. ಯಲಹಂಕ, ಓಕಳೀಪುರಂ ಮೇಲ್ಸೇತುವೆ, ವರ್ತೂರು ಬ್ರಿಡ್ಜ್, ಕೋರಮಂಗಲದ ಫುಟ್​​ಪಾತ್ ಕೆಲಸ, ಅಲ್ಲಾಳಸಂದ್ರದ ಮೇಲ್ಸೇತುವೆ ಕೆಲಸ ಆರಂಭಗೊಂಡಿದೆ. ಆದರೆ ಕಾರ್ಮಿಕರ ಕೊರತೆಯಿಂದ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಬಿಬಿಎಂಪಿಗೆ ಆದಾಯದ ಮೂಲವಾಗಿರುವ ಆಸ್ತಿತೆರಿಗೆ ಸಂಗ್ರಹದಲ್ಲೂ ತೀವ್ರ ಹಿನ್ನಡೆಯಾಗಿದೆ. ಈಗಾಗಲೇ ಶೇಕಡಾ ಐದರಷ್ಟು ರಿಯಾಯಿತಿಯನ್ನು ಮೇ ಅಂತ್ಯದ ವರೆಗೆ ವಿಸ್ತರಿಸಲಾಗಿದೆ. ಆದರೂ ಕಳೆದ ವರ್ಷ ಮೇ 13ರ ವೇಳೆಗೆ 1220 ಕೋಟಿ ಸಂಗ್ರಹವಾಗಿದ್ದರೆ, ಈ ಬಾರಿ 580 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಇದು ಮುಂದಿನ ಆರ್ಥಿಕ ವರ್ಷದ ಬಜೆಟ್ ಮೇಲೆ ಅಡ್ಡ ಪರಿಣಾಮ ಬೀಳಲಿದೆ.

ABOUT THE AUTHOR

...view details