ಬೆಂಗಳೂರು: ಕೋವಿಡ್ -19 ನಿಂದಾಗಿ ಉಂಟಾಗಿರುವ ಸಂಕಷ್ಟಕ್ಕೆ ಕೇವಲ ಮನುಷ್ಯರಷ್ಟೇ ಅಲ್ಲ ಪ್ರಾಣಿಗಳು ಸಿಕ್ಕಿ ಹಾಕಿಕೊಂಡಿದ್ದು, ನಗರದಲ್ಲಿನ ಹಲವು ಪೆಟ್ ಶಾಪ್ನಲ್ಲಿ ಆಹಾರವಿಲ್ಲದೇ ಬಂಧಿಯಾಗಿರುವ ಪಶು ಮತ್ತು ಪ್ರಾಣಿಗಳ ನೆರವಿಗೆ ಪ್ರಾಣಿ ದಯಾ ಸಂಘದ ಸ್ವಯಂ ಸೇವಕರು ಹಾಗೂ ಬಿಬಿಎಂಪಿ ಕೈ ಜೋಡಿಸಿದ್ದಾರೆ.
ಕರ್ನಾಟಕ ರಾಜ್ಯ ಪಶು ಕಲ್ಯಾಣ ಮಂಡಳಿ ಸದಸ್ಯ ಶಿವಾನಂದ ಡಂಬಳ್ ಮಾಹಿತಿ ನೀಡಿ, ಈಗಾಗಲೇ ನಗರದಲ್ಲಿರುವ ಪ್ರಾಣ, ಪಕ್ಷಿಗಳನ್ನ ರಕ್ಷಿಸುವ ನಿಟ್ಟಿನಲ್ಲಿ ಹಲವು ಪ್ರಾಣಿ ದಯಾ ಸಂಘಗಳಾದ ಸಿಯುಪಿಎ, ಪಿಎಫ್ಎ, ಎಸ್ಪಿಸಿಎ ಮತ್ತಿತರ ಸಂಸ್ಥೆಗಳು ಆಹಾರ ಒದಗಿಸುವುದಕ್ಕೆ ಬಿಬಿಎಂಪಿ ನೆರವಿಗೆ ಮುಂದೆ ಬಂದಿದೆ. ಬೆಂಗಳೂರನ್ನ ನಾಲ್ಕು ಭಾಗಗಳಾಗಿ ವಿಂಗಡಿಸಿ, ಪ್ರತಿ ವಿಭಾಗವನ್ನೂ ಒಂದೊಂದು ಸಂಸ್ಥೆಗಳಿಗೆ ವಹಿಸಿಕೊಡಲಾಗುತ್ತಿದ್ದು, ಆ ಭಾಗದಲ್ಲಿನ ಪ್ರಾಣಿ, ಪಕ್ಷಿಗಳಿಗೆ ಆಹಾರ ಒದಗಿಸುವ ನಿಟ್ಟಿನಲ್ಲಿ ಅವರು ಕಾರ್ಯಪ್ರವೃತ್ತರಾಗಲಿದ್ದಾರೆ.
ಪೆಟ್ಶಾಪ್ನಲ್ಲಿ ಬಂಧಿಯಾಗಿರುವ ಪ್ರಾಣಿಗಳ ರಕ್ಷಣೆಗೆ ಸಿದ್ದವಾದ ಬಿಬಿಎಂಪಿ ಬೆಳಗ್ಗೆ 7 ರಿಂದ 9.30 ಮತ್ತು ಸಂಜೆ 4 ರಿಂದ 6ರ ಮಧ್ಯೆ ಈ ಸ್ವಯಂ ಸೇವಕರು ಪ್ರಾಣಿಗಳಿಗೆ ಆಹಾರ ಒದಗಿಸಲು ಸೂಚಿಸಲಾಗಿದೆ. ಈ ಕಾರ್ಯಕ್ಕೆ ಬಿಬಿಎಂಪಿ ನೆರವು ನೀಡಲಿದ್ದು, ಪ್ರತಿ ವಿಭಾಗದಲ್ಲಿಯೂ ಸಿದ್ಧಗೊಳ್ಳುವ ಆಹಾರದ ಶುಚಿತ್ವ ಹಾಗೂ ಗುಣಮಟ್ಟವನ್ನ ಕಡ್ಡಾಯವಾಗಿ ಖಾತರಿಪಡಿಸಿಕೊಳ್ಳಲಾಗುತ್ತದೆ ಎಂದರು.
ಕೋರಮಂಗಲದ ಗೋಶಾಲೆ ಬೇಟಿ ನೀಡಿದ ಅಧಿಕಾರಿಗಳ ತಂಡಕ್ಕೆ ಅಲ್ಲಿರುವ ಸಾವಿರಾರು ದನ ಕರುಗಳಿಗೆ ಸಧ್ಯದ ಮಟ್ಟಿಗೆ ಆಹಾರ ಒದಗಿಸಲು ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು ಅಲ್ಲಿನ ವ್ಯವಸ್ಥಾಪಕರು ತಿಳಿಸಿದರು. ಆದರೆ ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಬಾಧಿಸಬಹುದು. ಹೀಗಾಗಿ ಸರ್ಕಾರದಿಂದ ಅಗತ್ಯವಿರುವಷ್ಟು ಮೇವು, ಆಹಾರ ದೊರಕುವಂತಾದರೆ ಬಹುದೊಡ್ಡ ಸಮಸ್ಯೆಗೆ ಪರಿಹಾರ ದೊರಕಿಸಿಕೊಟ್ಟಂತಾಗುತ್ತದೆ ಎಂದು ಮನವಿ ಮಾಡಿಕೊಳ್ಳಳಾಯ್ತು.
ನಗರದ ಎಲ್ಲಾ ಪೆಟ್ ಶಾಪ್ ಗಳಿಗೂ ಸೂಚನೆ ನೀಡಲಾಗಿದ್ದು, ಸರ್ಕಾರದಿಂದ ಪ್ರಮಾಣ ಪತ್ರ ಪಡೆಯಲು ತಿಳಿಸಲಾಗಿತ್ತು. ಆದರೆ ಇದಕ್ಕೆ ಈವರೆಗೂ ಯಾರು ಮುಂದೆ ಬಂದಿಲ್ಲ. ಹೀಗಾಗಿ ಮಂಡಳಿಯೇ ಈ ನಿಟ್ಟಿನಲ್ಲಿ ನಗರದೆಲ್ಲೆಡೆ ಸರ್ವೆ ಕಾರ್ಯ ಕೈಗೊಂಡು, ಪ್ರಾಣಿ, ಪಕ್ಷಿಗಳ ಸ್ಥಿತಿ, ಗತಿಯನ್ನ ಪರಿಶೀಲಿಸುವ ಕಾರ್ಯ ಮಾಡಲಿದೆ ಎಂದು ತಿಳಿಸಿದರು.
ಈ ವೇಳೆ, ಪರಿಸರ ಮತ್ತು ಪಶು ಕಾರ್ಯಕರ್ತ ಅರುಣ್ ಪ್ರಸಾದ್ ಮಾತನಾಡಿ, ಹಸಿದ ಪ್ರಾಣಿ ಪಕ್ಷಿಗಳನ್ನ ಕಾಪಾಡುವುದು ನಮ್ಮೆಲ್ಲರ ಹೊಣೆ. ಪ್ರಾಣಿ ಮತ್ತು ಪಕ್ಷಿಗಳಿಗೆ ಆಹಾರ, ನೀರು ಒದಗಿಸಿ, ಅವುಗಳು ಹಸಿವೆಯಿಂದ ಸಾವನ್ನಪ್ಪದಂತೆ ನೋಡಿಕೊಳ್ಳಬೇಕಿದೆ. ಒಂದು ವೇಳೆ, ನಗರದಲ್ಲಿನ ಎಲ್ಲ ಪ್ರಾಣಿ, ಪಕ್ಷಿಗಳು ಆಹಾರವಿಲ್ಲದೇ ಸಾವನ್ನಪ್ಪಲು ಆರಂಭಿಸಿದರೆ ಮತ್ತೊಂದು ಸಾಂಕ್ರಾಮಿಕ ಕಾಯಿಲೆ ಹರಡುವುದಕ್ಕೆ ಕಾರಣವಾಗುತ್ತದೆ", ಎಂದು ಎಚ್ಚರಿಸಿದರು.