ಬೆಂಗಳೂರು :ನಗರದಲ್ಲಿ ಎ ಸಿಮ್ಟಾಮ್ಯಾಟಿಕ್ ಕೋವಿಡ್ ಪಾಸಿಟಿವ್ ರೋಗಿಗಳು ಒಟ್ಟು 8600 ಜನ ಮನೆಯಲ್ಲೇ ಪ್ರತ್ಯೇಕ ವಾಸದಲ್ಲಿದ್ದಾರೆ. ಇವರಿಗೆ ಔಷಧಿ, ಪಲ್ಸ್ ಆಕ್ಸಿಮೀಟರ್ ಇರುವ ಕಿಟ್‌ನ 17 ದಿನಕ್ಕೆ ನೀಡಲು ಸಿದ್ಧತೆ ನಡೆಯುತ್ತಿದೆ. ಅಜೀಂ ಪ್ರೇಮ್ ಜಿ ಫೌಂಡೇಶನ್ ವತಿಯಿಂದ ಕಿಟ್ ನೀಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತರು ತಿಳಿಸಿದ್ದಾರೆ.
ಬಿಬಿಎಂಪಿ ನೂತನ ಆಯುಕ್ತ ಮಂಜುನಾಥ್ ಪ್ರಸಾದ್ ಸುದ್ದಿಗೋಷ್ಠಿ ಮಾರುಕಟ್ಟೆಗಳ ಸೀಲ್‌ಡೌನ್ ಮುಂದುವರಿಕೆ :ಅಧಿಕಾರ ವಹಿಸಿಕೊಂಡು ಎರಡು ದಿನ ಆಗಿರುವ ಆಯುಕ್ತ ಮಂಜುನಾಥ್ ಪ್ರಸಾದ್, ನಗರದ ಕೋವಿಡ್ ಪರಿಸ್ಥಿತಿಯ ಬಗ್ಗೆ ಪಾಲಿಕೆ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದರು. ಕೋವಿಡ್ ತಡೆಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗುತ್ತಿದೆ. ಮಾಸ್ಕ್ ಧರಿಸದವರಿಗೆ ದಂಡ ಐದು ಪಟ್ಟು ಹೆಚ್ಚಳ ಮಾಡಲು ಚಿಂತನೆ ನಡೆಯುತ್ತಿದೆ. ಜೊತೆಗೆ ನಾಳೆಯಿಂದ ಲಾಕ್‌ಡೌನ್ ಇರದಿದ್ದರೂ, ಮಾರುಕಟ್ಟೆಗಳ ಸೀಲ್‌ಡೌನ್ ಹಾಗೇ ಮುಂದುವರಿಯಲಿದೆ. ಕೆ ಆರ್ ಮಾರ್ಕೆಟ್, ಕಲಾಸಿಪಾಳ್ಯ ಮಾರ್ಕೇಟ್, ಯಶವಂತಪುರದ ಮಾರುಕಟ್ಟೆಗಳನ್ನು ಹಾಗೂ ಕೆಲ ಪಾರ್ಕ್‌ಗಳನ್ನು ಪರಿಸ್ಥಿತಿ ನೋಡಿಕೊಂಡು ತೆರೆಯಲಾಗುವುದು ಎಂದರು.
ಎಂಟು ಸಾವಿರಕ್ಕೂ ಹೆಚ್ಚು ಕಡೆ ಕಂಟೇನ್ಮೆಂಟ್ ಝೋನ್ ಇದ್ದು, ಹದಿಮೂರು ಸಾವಿರ ಜನರಿಗೆ ರೇಷನ್ ಕಿಟ್ ನೀಡಲಾಗಿದೆ. ಕಾರ್ಮಿಕ ಇಲಾಖೆ ವತಿಯಿಂದ ರೇಷನ್ ಕಿಟ್ ಬಡವರಿಗೆ ಉಚಿತವಾಗಿ ನೀಡಲಾಗಿದೆ ಎಂದರು.
ಪಾಸಿಟಿವ್ ಬಂದ್ರೂ ನೆಗೆಟಿವ್ ಬಂದ್ರೂ ವರದಿ ಕೊಡ್ಬೇಕು :ನಗರದಲ್ಲಿ ಸಾರ್ವಜನಿಕರು ಕೋವಿಡ್ ಟೆಸ್ಟ್ ಮಾಡಿಸಿಕೊಂಡಾಗ ಪಾಸಿಟಿವ್ ಇದ್ರೆ ಮಾತ್ರ ವರದಿ ಬರುತ್ತಿದ್ದು, ನೆಗೆಟಿವ್ ವರದಿಯ ಮಾಹಿತಿ ನೀಡುತ್ತಿಲ್ಲ. ಇದು ಗೊಂದಲಕ್ಕೆ ಕಾರಣವಾಗುತ್ತಿದೆ. ನೆಗೆಟಿವ್ ಇದ್ದರೂ ವರದಿ ನೀಡಲು ಕ್ರಮಕೈಗೊಂಡು, ತಪ್ಪಿದರೆ ಕ್ರಮಕೈಗೊಳ್ಳಲಾಗುವುದು ಎಂದರು. ಖಾಸಗಿ ಆಸ್ಪತ್ರೆಗಳ ಬೆಡ್ ಲಭ್ಯತೆ ಬಗ್ಗೆ ಆಗಾಗ್ಗೆ ಪರಿಶೀಲಿಸಲಾಗುವುದು. ನಾಲ್ಕು ಆಸ್ಪತ್ರೆಗಳಿಗೆ ಒಂದು ತಂಡ ಮಾಡಿದ್ದು, ಪರಿಶೀಲನೆ ನಡೆಸುತ್ತಿರುತ್ತಾರೆ ಎಂದರು.
ಜೊತೆಗೆ ಖಾಸಗಿ ಆಸ್ಪತ್ರೆಗಳು ಬೆಡ್ ಖಾಲಿ ಇರುವ ಬಗ್ಗೆ 24 ಗಂಟೆಯಲ್ಲಿ ಮಾಹಿತಿ ನೋಡಬೇಕು, ಇಲ್ಲವಾದ್ರೆ ವಿಪತ್ತು ನಿರ್ವಹಣೆಯಡಿ ಕೇಸ್ ದಾಖಲಾಗಲಿದೆ ಎಂದರು. ಈಗಾಗಲೇ ಪಾಲಿಕೆಯ ಅಧಿಕಾರ ಬಳಸಿ, 291 ಆಸ್ಪತ್ರೆಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದರು.
ಸ್ಮಶಾನ ಕೊರತೆ ಇಲ್ಲ :ಕೋವಿಡ್ ಹಾಗೂ ಸಹಜ ಸಾವನ್ನಪ್ಪುವ ವ್ಯಕ್ತಿಗಳ ಶವ ಸಂಸ್ಕಾರ ಮಾಡಲು ಎಲ್ಲಾ ವ್ಯವಸ್ಥೆ ಇದೆ. ಒಟ್ಟು 12 ಸ್ಮಶಾನಗಳಿದ್ದು, ಒಂದು ಮಾತ್ರ ದುರಸ್ಥಿಯಲ್ಲಿದೆ. ಪ್ರತಿ ವಿದ್ಯುತ್ ಚಿತಾಗಾರದಲ್ಲಿ ದಿನವೊಂದಕ್ಕೆ 16 ಶವಗಳನ್ನು ಅಂತ್ಯಸಂಸ್ಕಾರ ಮಾಡಬಹುದು. ನಗರದಲ್ಲಿ ಪ್ರತಿ ದಿನಕ್ಕೆ 192 ಶವ ಸಂಸ್ಕಾರ ಮಾಡುವ ಕೆಪಾಸಿಟಿ ಇದೆ. ನಾಲ್ಕು ವಿದ್ಯುತ್ ಚಿತಾಗಾರಗಳು ಕೋವಿಡ್- 19ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ಮೀಸಲಿಡಲಾಗಿದೆ.
ಯಲಹಂಕ ಮೇಡಿ ಅಗ್ರಹಾರ, ಬೊಮ್ಮನಹಳ್ಳಿ ಕೂಡ್ಲು, ಕೆಂಗೇರಿ ವಿದ್ಯುತ್ ಚಿತಾಗಾರ, ಮಹಾದೇವಪುರದಲ್ಲಿ ವಿದ್ಯುತ್ ಚಿತಾಗಾರ ಅಂತ್ಯಸಂಸ್ಕಾರಕ್ಕೆ ಮೀಸಲಿಟ್ಟಿದ್ದ ಅವಧಿ ವಿಸ್ತರಣೆ ಮಾಡಲಾಗಿದ್ದು, ಬೆಳಗ್ಗೆ ಏಳರಿಂದ ರಾತ್ರಿ 8 ರವರೆಗೆ ಅಂತ್ಯಸಂಸ್ಕಾರಕ್ಕೆ ಅವಕಾಶ ಇದೆ.
ಪೌರಕಾರ್ಮಿಕರಿಗೆ ಆಂಟಿಜೆನ್ :ಪೌರಕಾರ್ಮಿಕರ ಬೇಡಿಕೆಯನ್ನು ಬಿಬಿಎಂಪಿ ಈಡೇರಿಸುತ್ತದೆ. ಸಂಬಳದ ಜೊತೆಗೆ ಕೋವಿಡ್ ವಿಶೇಷ ವೇತನ (ಇನ್ಸ್ ನ್ಟಿವ್) ನೀಡಲಿದ್ದೇವೆ. ಎಲ್ಲಿರಿಗೂ ಆಂಟಿಜೆನ್ ಟೆಸ್ಟ್ ಮಾಡಲಾಗುತ್ತದೆ ಎಂದರು.
ಕೋವಿಡ್ ಸೋಂಕು ಪರೀಕ್ಷೆ ಹೆಚ್ಚಳ :ಒಂದು ವಾರದಲ್ಲಿ ನಿನ್ನೆ ಮಾತ್ರ ಕಡಿಮೆ ವರದಿಗಳು ಬಂದಿವೆ. ಟೆಸ್ಟ್ಗಳನ್ನು ಕಡಿಮೆ ಮಾಡುವುದಿಲ್ಲ. ಈಗ ಐವತ್ತು ಸಾವಿರ ಕಿಟ್ ಇದ್ದು, ಇನ್ನು ಹೆಚ್ಚಿನ ಕಿಟ್‌ಗಳಿಗೆ ಬೇಡಿಕೆ ಇಡಲಾಗಿದೆ. ಪಾಲಿಕೆಗೆ ಸಿಬ್ಬಂದಿ ಕೊರತೆ ಉಂಟಾಗಿದ್ದು, ಸ್ವಯಂ ಸೇವಕರಾಗಿ ಕೆಲಸ ಮಾಡುವವರಿಗೆ ಅವಕಾಶವಿದೆ. ಉಳಿದಂತೆ ಬೆಂಗಳೂರಿನ ಸೀಲ್‌ಡೌನ್ ಪ್ರದೇಶಗಳ ಬಗ್ಗೆ ತಜ್ಞರ ಸಭೆ ನಡೆಯಲಿದ್ದು, ಬಳಿಕ ತೀರ್ಮಾನವಾಗಲಿದೆ ಎಂದರು.