ಕರ್ನಾಟಕ

karnataka

ETV Bharat / city

ಬಿಬಿಎಂಪಿ ಚುಕ್ಕಾಣಿ ಹಿಡಿದ ತುಷಾರ್ ಗಿರಿನಾಥ್: ಪಾಲಿಕೆ ಮುಖ್ಯ ಆಯುಕ್ತರಾಗಿ ಅಧಿಕಾರ ಸ್ವೀಕಾರ

ಬಿಬಿಎಂಪಿಯ ನೂತನ ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ಅಧಿಕಾರ ಸ್ವೀಕರಿಸಿದ್ದು, ಗೌರವ್ ಗುಪ್ತ ಅವರು ಅಧಿಕಾರ ಹಸ್ತಾಂತರ ಮಾಡಿದ್ದಾರೆ.

BBMP New chief Tushar girinath taking charge
ಬಿಬಿಎಂಪಿ ಚುಕ್ಕಾಣಿ ಹಿಡಿದ ತುಷಾರ್ ಗಿರಿನಾಥ್: ಪಾಲಿಕೆ ಮುಖ್ಯ ಆಯುಕ್ತರಾಗಿ ಅಧಿಕಾರ ಸ್ವೀಕಾರ

By

Published : May 6, 2022, 3:51 PM IST

ಬೆಂಗಳೂರು:ರಾಜಧಾನಿ ಆಡಳಿತದ ಚುಕ್ಕಾಣಿ ಆಗಿರುವ ಬಿಬಿಎಂಪಿಯ ನೂತನ ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ಅಧಿಕಾರ ಸ್ವೀಕರಿಸಿದರು. ನಗರದ ಪಾಲಿಕೆ ಕೇಂದ್ರ ಕಚೇರಿಯಲ್ಲಿ ನಿಕಟ ಪೂರ್ವ ಮುಖ್ಯ ಆಯುಕ್ತ ಗೌರವ್ ಗುಪ್ತ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆಗಿದ್ದ ತುಷಾರ್ ಗಿರಿನಾಥ್​​ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದರು.

ನಿನ್ನೆಯಷ್ಟೇ ರಾಜ್ಯ ಸರ್ಕಾರ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರನ್ನು ವರ್ಗಾವಣೆ ಮಾಡಿತ್ತು. ಗೌರವ್‌ ಗುಪ್ತ ಬಿಬಿಎಂಪಿ ಆಡಳಿತಾಧಿಕಾರಿಯಾಗಿ 2020ರ ಸೆಪ್ಟೆಂಬರ್ 12ರಂದು ಅಧಿಕಾರ ಸ್ವೀಕರಿಸಿದ್ದರು. ನಂತರ 2021ರ ಏಪ್ರಿಲ್ 1ರಂದು ಬಿಬಿಎಂಪಿ ಮುಖ್ಯ ಆಯುಕ್ತ ಹುದ್ದೆಯ ಅಧಿಕಾರ ಸ್ವೀಕರಿಸಿದ್ದರು.

ಅಧಿಕಾರ ಹಸ್ತಾಂತರಿಸಿದ ಗೌರವ್ ಗುಪ್ತ

ಒಳ್ಳೆಯ ಸೇವೆ ಕೊಡಲು ಸಿದ್ಧ: ಅಧಿಕಾರ ಸ್ವೀಕರಿಸಿದ ಬಳಿಕ ಪ್ರತಿಕ್ರಿಯಿಸಿದ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬಿಬಿಎಂಪಿ ಎದುರಿಗೆ ದೊಡ್ಡ ಸವಾಲಿದೆ. ಮುಂದೆ ಕೋವಿಡ್ 4ನೇ ಅಲೆ ಬರುತ್ತಿದೆ. ಜನರಿಗೆ ಒಳ್ಳೆಯ ಸೇವೆ ಕೊಡಬೇಕೆಂದು ಸಿದ್ಧವಾಗಿದ್ದೇವೆ ಎಂದರು.

ಒಳ್ಳೆಯ ಕೆಲಸ ನಡೆಯುತ್ತಿದೆ: ಬಿಬಿಎಂಪಿಯಲ್ಲಿ ಈಗಾಗಲೇ ಒಳ್ಳೆ ಕೆಲಸ ನಡೆಯುತ್ತಿದೆ. ಹಿಂದಿನ ಆಯುಕ್ತರು ಒಳ್ಳೆ ರೀತಿ ಕೆಲಸ ಮಾಡಿದ್ದಾರೆ. ನಾವು ಕೂಡ ಅದೇ ರೀತಿ ಉತ್ತಮ ಕೆಲಸ ನಿರ್ವಹಿಸುತ್ತೇನೆ. ಮಳೆಗಾಲದಲ್ಲಿ ಪ್ರತಿವರ್ಷ ಕಷ್ಟವಾಗುತ್ತದೆ. ಈ ಸಮಸ್ಯೆಗೆ ತಕ್ಕಂತೆ ಪರಿಹಾರ ಕಂಡುಕೊಳ್ಳುತ್ತೇವೆ ಎಂದು ನುಡಿದರು.

ಬಿಬಿಎಂಪಿಗೆ ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ತುಷಾರ್ ಗಿರಿನಾಥ್​

ಪ್ರತಿಯೊಂದು ಹುದ್ದೆಗೆ ಅದರದೇ ಆದ ಸವಾಲು: 30 ವರ್ಷ ನಾನು ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದೇನೆ. ಆದರೆ, ಪ್ರತಿಯೊಂದು ಹುದ್ದೆಗೆ ತಮ್ಮದೇ ಆದ ಸವಾಲಿರುತ್ತದೆ. ಅದಕ್ಕೆಲ್ಲ ಹೆದರಿ ಕೂರುವುದಕ್ಕೆ ಆಗುವುದಿಲ್ಲ. ಕೆಲಸ ಮಾಡಲೇಬೇಕು ಎಂದು ಬಂದ ಮೇಲೆ ಕೆಲಸ ಮಾಡಲೇಬೇಕು. ಹೊಸ ಹುದ್ದೆಗೆ ತಕ್ಕಂತೆ ಕೆಲಸ ನಿರ್ವಹಿಸುತ್ತೇನೆ ಎಂದರು.

ಎಲ್ಲರೂ ಕೆಲಸದಲ್ಲಿ ಕೈಜೋಡಿಸಬೇಕು: ಬಿಬಿಎಂಪಿ ಎಂದರೆ ನಾಗರಿಕರಿಗೆ ಸೇವೆ ಕೊಡುವುದರ ಜೊತೆಗೆ ಕೆಲಸವನ್ನು ತೆಗೆದುಕೊಳ್ಳುವುದು. ಸಮಸ್ಯೆ ಆದರೆ ಎಲ್ಲರಿಗೂ ಆಗುತ್ತದೆ. ಹಾಗಾಗಿ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು. ಎಲ್ಲರೂ ಕೂಡ ನಮ್ಮ ಕೆಲಸದ ಜೊತೆ ಕೈ ಜೋಡಿಸಬೇಕು‌. ಒಂದೇ ದಿನ ನಾನು ಅಶ್ವಾಸನೆ ಕೊಡುವುದಿಲ್ಲ. ಆದರೆ, ಶಕ್ತಿಗೆ ಮೀರಿ ಕೆಲಸ ನಿರ್ವಹಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಜನರೊಂದಿಗೆ ನೇರ ಸಂಪರ್ಕ: ಪಾಲಿಕೆಯಲ್ಲಿ ಜನರೊಂದಿಗೆ ನೇರ ಸಂಪರ್ಕ ಇರುತ್ತದೆ. ಸರ್ಕಾರ ನಂಬಿ ಕೆಲಸ ಕೊಟ್ಟಿದೆ. ಇಲ್ಲಿ ಏನಾಗುತ್ತೆ ಪ್ರತಿಯೊಬ್ಬರಿಗೂ ಗೊತ್ತಾಗುತ್ತದೆ. ಸೃಜನಾತ್ಮಕವಾಗಿ ಯೋಚನೆ ಮಾಡಬೇಕು. ಇನ್ನೂ ಸಮಸ್ಯೆಗಳಿಗೆ ಎಲ್ಲ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ತುಷಾರ್ ಗಿರಿನಾಥ್

ಗುಂಡಿ ಮುಚ್ಚಲು ಪ್ರಯತ್ನ:ಗುಂಡಿ ಮುಕ್ತ ರಸ್ತೆ ಬರಬೇಕೆಂದು ಜನರಿಗೆ ಆಸೆ ಇದೆ. ಹೀಗಾಗಿ ನಾವು ಗುಂಡಿ ಮುಕ್ತ ರಸ್ತೆ ಮಾಡುವುದಾಗಿ ಪ್ರಯತ್ನ ಮಾಡತ್ತೇವೆ. ಬಿಡಬ್ಲೂಎಸ್ಎಸ್​​ಬಿ ಸೇರಿದಂತೆ ಎಲ್ಲ ಇಲಾಖೆಗಳ ಜೊತೆ ಸಂಪರ್ಕ ಇಟ್ಟುಕೊಳ್ಳುತ್ತೇವೆ. ಮೊದಲು ಜನರಿಗೆ ಸ್ಪಂದನೆ ಮಾಡಿಕೊಂಡು ಕ್ರಿಯಾಶೀಲವಾಗಿ ಕೆಲಸ ಮಾಡುವ ವ್ಯವಸ್ಥೆ ಆಗಬೇಕು ಎಂದು ತುಷಾರ್ ಗಿರಿನಾಥ್ ನುಡಿದರು.

ಇದನ್ನೂ ಓದಿ:ರಾಜ್ಯಾದ್ಯಂತ ಸೂಸೂತ್ರವಾಗಿ ನಡೆದ ಪಿಯುಸಿ ಇಂಗ್ಲಿಷ್​ ಪರೀಕ್ಷೆ.. 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು!

ABOUT THE AUTHOR

...view details