ಕರ್ನಾಟಕ

karnataka

ETV Bharat / city

ನಾಳೆ‌ ಬಿಬಿಎಂಪಿ ಮೇಯರ್​​​ ಅಭ್ಯರ್ಥಿ ಆಯ್ಕೆ: ಕಟೀಲ್​​ ನೇತೃತ್ವದಲ್ಲಿ ಸಭೆ, ಬಿಎಸ್​ವೈ ಅನುಪಸ್ಥಿತಿ! - ನಳಿನ್​ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆ

ಅ. 1ರಂದು ನಡೆಯಲಿರುವ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗೆ ಬಿಜೆಪಿಯಿಂದ ಅಭ್ಯರ್ಥಿ ಆಯ್ಕೆ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆಗೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಗೈರಾಗಲಿದ್ದಾರೆ ಎನ್ನಲಾಗಿದೆ.

bbmp mayor-candidate-to-be-elected-tomorrow

By

Published : Sep 29, 2019, 5:57 PM IST

ಬೆಂಗಳೂರು:ಮೇಯರ್ ಹಾಗೂ ಉಪ ಮೇಯರ್ ಅಭ್ಯರ್ಥಿ ಆಯ್ಕೆ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ನೇತೃತ್ವದಲ್ಲಿ ನಾಳೆ ಸಭೆ ನಡೆಯಲಿದೆ. ಈ ಸಭೆಗೆ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರ ಅನುಪಸ್ಥಿತಿ ಕಾಡಲಿದೆ ಎನ್ನಲಾಗಿದೆ.

ಅಕ್ಟೋಬರ್‌‌ 1ರಂದು ಬಿಬಿಎಂಪಿ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಮೇಯರ್ ಹುದ್ದೆಗಾಗಿ ಪೈಪೋಟಿ ತೀವ್ರಗೊಂಡಿದ್ದು, ಪಕ್ಷದ ಏಳು‌ ಪಾಲಿಕೆ ಸದಸ್ಯರು ಮೇಯರ್ ಕುರ್ಚಿ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಶಾಸಕ ಎಸ್.ರಘು ನೇತೃತ್ವದ ಸಮಿತಿ ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಿಸಿದೆ.

ಕಟೀಲ್ ನೇತೃತ್ವ:ಈಗಾಗಲೇ ಬಿಜೆಪಿ ಪಾಲಿಕೆ ಸದಸ್ಯರ ಅಭಿಪ್ರಾಯ ಸಂಗ್ರಹಿಸಲಾಗಿದೆ. ನಳಿನ್ ​ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಬೆಂಗಳೂರಿನ ಸಚಿವರು, ಸಂಸದರು, ಶಾಸಕರು, ಪರಿಷತ್​ ಸದಸ್ಯರು ಪಾಲ್ಗೊಳ್ಳಲಿದ್ದು, ಇವರೆಲ್ಲರ ಅಭಿಪ್ರಾಯವನ್ನೂ ಕಟೀಲ್​ ಪಡೆಯಲಿದ್ದಾರೆ. ಎಸ್.ರಘು ನೇತೃತ್ವದ ಸಮಿತಿ ತನ್ನ ವರದಿಯನ್ನು ಸಭೆಯಲ್ಲಿ ಸಲ್ಲಿಸಲಿದೆ. ಈ ಎಲ್ಲವನ್ನೂ ಪರಿಗಣಿಸಿ ಮೇಯರ್, ಉಪ ಮೇಯರ್ ಅಭ್ಯರ್ಥಿಯ ಹೆಸರು ಹೊರಬೀಳುವ ಸಾಧ್ಯತೆ ಇದೆ.

ಬಿಜೆಪಿ ಕಚೇರಿಯಲ್ಲಿ ನಡೆದ ಸಭೆ

ಸಚಿವ ಆರ್.ಅಶೋಕ್ ಕ್ಷೇತ್ರದ ಪಾಲಿಕೆ ಸದಸ್ಯ ಎನ್.ಶ್ರೀನಿವಾಸ್, ಪದ್ಮನಾಭ ರೆಡ್ಡಿ ಮೇಯರ್ ಸ್ಥಾನಕ್ಕೆ ಭಾರೀ ಲಾಬಿ ನಡೆಸುತ್ತಿದ್ದಾರೆ. ಇತ್ತ ಆರ್​​ಎಸ್ಎಸ್ ಹಿನ್ನೆಲೆಯುಳ್ಳ ಮುನೇಂದ್ರ ಕುಮಾರ್ ಹೆಸರೂ ಬಲವಾಗಿ ಕೇಳಿಬರುತ್ತಿದೆ. ನಾಳಿನ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಎಲ್ಲರ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಸಿಎಂ ಅನುಪಸ್ಥಿತಿಯಲ್ಲಿ ಸಭೆ:ಮೇಯರ್ ಹಾಗೂ ಉಪ ಮೇಯರ್ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರನ್ನು ಕಡೆಗಣಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಎಸ್.ರಘು ನೇತೃತ್ವದ ಆಂತರಿಕ ಸಮಿತಿಯನ್ನು ಕಟೀಲ್ ರದ್ದುಗೊಳಿಸಿದ್ದರು. ಹೀಗಾಗಿ ಬಿಎಸ್​​ವೈ ಅಂತರ‌ ಕಾಯ್ದುಕೊಂಡಿದ್ದಾರೆ. ಅಲ್ಲದೆ, ನಾಳೆ ಸಭೆಗೆ ಗೈರಾಗಲಿದ್ದು, ಬಿಎಸ್​ವೈ ತಮ್ಮ ಸ್ವಕ್ಷೇತ್ರ ಶಿಕಾರಿಪುರ ಪ್ರವಾಸ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಅನರ್ಹ ಶಾಸಕರ ಜತೆಯೂ ಚರ್ಚೆ?:ಬೆಂಗಳೂರಿನ ಅನರ್ಹ ಶಾಸಕರೊಂದಿಗೂ ಮೇಯರ್ ಹಾಗೂ ಉಪ ಮೇಯರ್ ಅಭ್ಯರ್ಥಿ ಆಯ್ಕೆ ಕುರಿತು ಸಮಾಲೋಚನೆ ನಡೆಸಲಾಗುತ್ತದೆ. ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ತಮ್ಮ ಅಭಿಪ್ರಾಯವನ್ನೂ ಪಡೆಯವಂತೆ ತಾಕೀತು ಮಾಡಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರಲು ಅನರ್ಹರ ಬೆಂಬಲಿತ ಪಾಲಿಕೆ‌ ಸದಸ್ಯರ ಬೆಂಬಲವೂ ಅಗತ್ಯವಿದೆ. ಈ ಸಂಬಂಧ ಯಾವ ರಣನೀತಿ ಅನುಸರಿಸರಿಸಬೇಕು ಎಂಬುದರ ಬಗ್ಗೆ ಸಮಾಲೋಚನೆ ನಡೆಸಲು ಸಭೆ ನಡೆಸಲಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ ಮುಂದೆ ಯಾವ ರೀತಿ ರಣತಂತ್ರ ರೂಪಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ABOUT THE AUTHOR

...view details