ಬೆಂಗಳೂರು: ಸರ್ಕಾರಿ ಸಂಸ್ಥೆಗಳೇ ನಿಯಮ ಪ್ರಕಾರ ಸೇವಾ ತೆರಿಗೆ ಪಾವತಿಸದೆ ಪಾಲಿಕೆ ಬೊಕ್ಕಸಕ್ಕೆ ನಷ್ಟ ಉಂಟುಮಾಡುತ್ತಿರುವ ಹಿನ್ನೆಲೆ ಐದಾರು ಬಾರಿ ನೋಟೀಸ್ ನೀಡಿ, ಸೇವಾ ತೆರಿಗೆ ಪಾವತಿಸುವಂತೆ ಎಚ್ಚರಿಸಿದರೂ ಕ್ಯಾರೇ ಅನ್ನದ ಕೇಂದ್ರ ಸರ್ಕಾರದ ಕಟ್ಟಡಗಳಿಗೆ ಇಂದು ಬೀಗ ಜಡಿಯಲಾಗಿದೆ.
ಕೋಟ್ಯಂತರ ರುಪಾಯಿ ಸೇವಾ ತೆರಿಗೆ ಬಾಕಿ ಉಳಿಸಿದ್ದ ಕೇಂದ್ರ ಸರ್ಕಾರದ ಅಧೀನದಲ್ಲಿರುವ ಮೂರು ಸಂಸ್ಥೆಗಳನ್ನು ಪಾಲಿಕೆ ಕಂದಾಯ ಅಧಿಕಾರಿಗಳು ಇಂದು ಜಪ್ತಿ ಮಾಡಿದ್ದಾರೆ. ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಐವತ್ತು ಎಕರೆ ಜಾಗದಲ್ಲಿದ್ದ ಕೇಂದ್ರ ಉತ್ಪಾದನಾ ತಂತ್ರಜ್ಞಾನ ಸಂಸ್ಥೆಯ ಕಟ್ಟಡಕ್ಕೆ ಇಂದು ಆರ್ ಆರ್ ನಗರ ವಲಯದ ಉಪ ಆಯುಕ್ತ ಶಿವೇಗೌಡ ನೇತೃತ್ವದಲ್ಲಿ ದಾಳಿ ನಡೆಸಿ ವಶಕ್ಕೆ ಪಡೆಯಲಾಗಿದೆ.
2005- 2006 ರಿಂದ 2019-20 ರ ವರೆಗೆ ಸೇವಾ ತೆರಿಗೆ ಹಾಗೂ ಬಡ್ಡಿ ಸೇರಿ ಏಳು ಕೋಟಿ 91 ಲಕ್ಷ ಪಾವತಿಸದೆ ಸುಸ್ತಿದಾರರಾಗಿರುವುದರಿಂದ ಈ ಕಟ್ಟಡವನ್ನು ಪಾಲಿಕೆಯ ಸ್ವತ್ತೆಂದು ಪರಿಗಣಿಸಲಾಗಿದೆ ಎಂದು ಬ್ಯಾನರ್ ಹಾಕಿ ಬೀಗ ಜಡಿಯಲಾಗಿದೆ. ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿ ಲಕ್ಷ್ಮೀದೇವಿನಗರ ಉಪವಲಯದ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.