ಬೆಂಗಳೂರು: ಬರೋಬ್ಬರಿ ನಾಲ್ಕು ವರ್ಷಗಳ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಆಡಳಿತದ ಬಳಿಕ, ಕೊನೆಯ ಐದನೇ ವರ್ಷ ಬಿಜೆಪಿ, ಬಿಬಿಎಂಪಿಯ ಚುಕ್ಕಾಣಿ ಹಿಡಿದಿದೆ. ಜೋಗುಪಾಳ್ಯ ವಾರ್ಡ್ನ ಎನ್ ಗೌತಮ್ ಕುಮಾರ್ ಮೇಯರ್ ಆಗಿ 129 ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಸತ್ಯನಾರಾಯಣ 112 ಮತ ಪಡೆದು ಸೋತಿದ್ದು, 17 ಮತಗಳ ಅಂತರದಲ್ಲಿ ಗೌತಮ್ ಕುಮಾರ್ ಗೆದ್ದಿದ್ದಾರೆ. ಇನ್ನು ಉಪಮೇಯರ್ ಆಗಿ ಬೊಮ್ಮನಹಳ್ಳಿ ವಾರ್ಡ್ನ ರಾಮ್ ಮೋಹನ್ ರಾಜ್ ಬಹುಮತ ಪಡೆದು ಗೆದ್ದಿದ್ದಾರೆ.
ಪಕ್ಷೇತರರಲ್ಲಿ ಆನಂದ್ ಹಾಗೂ ಮುಜಾಹಿದ್ ಪಾಷಾ ಮೈತ್ರಿ ಪಕ್ಷಕ್ಕೆ ಬೆಂಬಲ ಸೂಚಿಸಿದರೆ, ಚಂದ್ರಪ್ಪ ರೆಡ್ಡಿ, ಗುಂಡಣ್ಣ(ಲಕ್ಷ್ಮಿನಾರಾಯಣ) ಗಾಯತ್ರಿ, ರಮೇಶ್, ಮಮತಾ ಶರವಣ ಪಕ್ಷೇತರರು ಬಿಜೆಪಿಗೆ ಬೆಂಬಲ ಸೂಚಿಸಿದರು. ಜೆಡಿಎಸ್ನ ಬಂಡಾಯ ಕಾರ್ಪೋರೇಟರ್ಗಳಾದ ದೇವದಾಸ್, ಹಾಗೂ ಮಂಜುಳಾ ನಾರಾಯಣಸ್ವಾಮಿ ವಿಪ್ ಉಲ್ಲಂಘನೆ ಮಾಡಿ, ಚುನಾವಣೆಯಿಂದ ಹೊರ ನಡೆದರು. ಆದರೆ ಗೈರಾಗುತ್ತಾರೆ ಎನ್ನಲಾಗಿದ್ದ ಅನರ್ಹ ಶಾಸಕರ ಬೆಂಬಲಿಗರು, ಚುನಾವಣೆಗೆ ಹಾಜರಾಗಿ ಮೈತ್ರಿ ಪಕ್ಷಕ್ಕೇ ಬೆಂಬಲ ಸೂಚಿಸಿದರು.
ನಾಲ್ಕು ಸ್ಥಾಯಿ ಸಮಿತಿ ಚುನಾವಣೆ ಮುಂದೂಡಿಕೆ:
ಮೇಯರ್-ಉಪಮೇಯರ್ ಚುನಾವಣೆ ಜೊತೆಗೆ ನಾಲ್ಕು ಸ್ಥಾಯಿ ಸಮಿತಿಗಳ ಚುನಾವಣೆಯೂ ನಿಗದಿಯಾಗಿತ್ತು. ಆದರೆ, ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಮುಂದೂಡಿಕೆ ಮಾಡಿ ಚುನಾವಣೆ ಆಯುಕ್ತರಾದ ಹರ್ಷಗುಪ್ತ ಘೋಷಣೆ ಮಾಡಿದರು.