ಬೆಂಗಳೂರು: ಇಂದು ನಡೆಯುವ ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಮಧ್ಯರಾತ್ರಿಯವರೆಗೂ ಬಿಜೆಪಿ ಮುಖಂಡರು ಸಭೆ ನಡೆಸಿದರು.
ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಸದ್ಯ ತಲಾ ಇಬ್ಬರು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಆದ್ರೆ ಅಧಿಕೃತವಾಗಿ ಯಾವುದೇ ಹೆಸರುಗಳನ್ನು ಬಹಿರಂಗಪಡಿಸಿಲ್ಲ ಎಂದು ತಿಳಿದುಬಂದಿದೆ.
ಮೇಯರ್ ಸ್ಥಾನಕ್ಕೆ ಜೋಗುಪಾಳ್ಯ ವಾರ್ಡ್ ಸದಸ್ಯ ಎಂ.ಗೌತಮ್ ಕುಮಾರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಹೆಚ್.ಎಸ್.ಆರ್ ಲೇಔಟ್ ವಾರ್ಡ್ ಸದಸ್ಯ ಗುರುಮೂರ್ತಿ ರೆಡ್ಡಿ ಹೆಸರು ಬಹುತೇಕ ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ. ಎರಡೂ ಸ್ಥಾನಗಳಿಗೂ ಸಂಘ ಪರಿವಾರ ಮೂಲದ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿದೆ.
ಬಿಬಿಎಂಪಿ ಚುನಾವಣೆ: ಸಭೆ ಬಳಿಕ ಅರವಿಂದ್ ಲಿಂಬಾವಳಿ ಮಾಹಿತಿ ನೀಡಿದರು. ಇಬ್ಬಿಬ್ಬರ ಹೆಸರು ಅಂತಿಮ, ಕೊನೆ ಗಳಿಗೆಯಲ್ಲಿ ಯಾರಿಗೆ ಲಕ್?
ಸಭೆಯಲ್ಲಿ ಮೇಯರ್ ಸ್ಥಾನಕ್ಕೆ ಜೋಗುಪಾಳ್ಯ ವಾರ್ಡ್ ಸದಸ್ಯ ಎಂ. ಗೌತಮ್ ಕುಮಾರ್ ಮತ್ತು ಕಾಚರಕನಹಳ್ಳಿ ವಾರ್ಡ್ ಸದಸ್ಯ ಪದ್ಮನಾಭ ರೆಡ್ಡಿ ಹೆಸರು ಅಂತಿಮವಾಗಿದೆ. ಉಪಮೇಯರ್ ಸ್ಥಾನಕ್ಕೆ ಹೆಚ್ ಎಸ್ ಆರ್ ಲೇಔಟ್ ವಾರ್ಡ್ ಸದಸ್ಯ ಗುರುಮೂರ್ತಿ ರೆಡ್ಡಿ ಮತ್ತು ಹೊಸಹಳ್ಳಿ ವಾರ್ಡ್ ಸದಸ್ಯೆ ಆರ್. ಮಹಾಲಕ್ಷ್ಮಿ ಹೆಸರು ಅಂತಿಮವಾಗಿದೆಯಂತೆ. ಆದ್ರೆ ಗೌತಮ್ ಕುಮಾರ್ ಮತ್ತು ಗುರುಮೂರ್ತಿ ರೆಡ್ಡಿ ನಾಮಪತ್ರ ಸಲ್ಲಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಸಭೆ ಬಳಿಕ ಮಾತನಾಡಿದ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ, ಮೇಯರ್ ಹಾಗೂ ಉಪ ಮೇಯರ್ ಆಯ್ಕೆಯಲ್ಲಿ ಸ್ವಲ್ಪ ಗೊಂದಲ ಸೃಷ್ಟಿಯಾಗಿತ್ತು. ಆದರೆ ಚರ್ಚೆ ನಂತರ ಈಗ ಎಲ್ಲ ಗೊಂದಲಗಳನ್ನು ಬಗೆಹರಿಸಿದ್ದೇವೆ. ತಡರಾತ್ರಿ ಆಗಿರುವ ಕಾರಣ ಮುಖ್ಯಮಂತ್ರಿ ಯಡಿಯೂರಪ್ಪನವರು ಸಂಪರ್ಕಕ್ಕೆ ಸಿಗಲಿಲ್ಲ. ಹೀಗಾಗಿ ಅಭ್ಯರ್ಥಿಗಳ ಪಟ್ಟಿಯನ್ನು ಬೆಳಿಗ್ಗೆ ಅಂತಿಮಗೊಳಿಸುತ್ತೇವೆ ಎಂದು ಮಾರ್ಮಿಕವಾಗಿ ಹೇಳಿದರು.
ಬೆಂಗಳೂರು ಕೋರ್ ಏರಿಯಾ ಮತ್ತು ಔಟರ್ ಏರಿಯಾ ಪರಿಗಣನೆಗೆ ತೆಗೆದುಕೊಂಡಿರುವ ಬಿಜೆಪಿ, ಔಟರ್ ಏರಿಯಾದಿಂದ ಮೇಯರ್ ಅಭ್ಯರ್ಥಿ, ಕೋರ್ ಏರಿಯಾದಿಂದ ಉಪಮೇಯರ್ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಬೆಳಗ್ಗೆ ಎಂಟು ಗಂಟೆಗೆ ಬೆಂಗಳೂರಿನ ವಿಠಲ್ ಮಲ್ಯ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಎಲ್ಲಾ ಬಿಜೆಪಿ ಕಾರ್ಪೋರೇಟರ್ಗಳಿಗೆ ಪಕ್ಷ ಉಪಹಾರ ಕೂಟದ ಸಭೆ ಕರೆದಿದೆ. ಈ ಸಭೆಯಲ್ಲಿ ಅಧಿಕೃತವಾಗಿ ಅಭ್ಯರ್ಥಿ ಘೋಷಣೆ ಆಗಲಿದ್ದು, ನಂತರ ಬಿಜೆಪಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲಿದ್ದಾರೆ. ಇದಕ್ಕೂ ಮುನ್ನ ಅಭ್ಯರ್ಥಿಗಳ ಅಂತಿಮ ಆಯ್ಕೆ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಸಿಎಂ ಯಡಿಯೂರಪ್ಪ ಜೊತೆ ದೂರವಾಣಿ ಮೂಲಕ ಔಪಚಾರಿಕವಾಗಿ ಚರ್ಚೆ ನಡೆಸಲಿದ್ದಾರೆ.