ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಕಸದ ಲಾರಿಗಳಿಂದ ಅನಾಹುತ ಪ್ರಕರಣಗಳಲ್ಲಿ ನಮ್ಮ ಚಾಲಕರ ತಪ್ಪಿಲ್ಲ. ನಮ್ಮ ಕಸದ ಲಾರಿಗಳಿಂದ ಅಪಘಾತ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದರೆ, ನಾವೇ ಕ್ರಮ ತೆಗೆದುಕೊಳ್ಳುತ್ತೇವೆ. ಸುಖಾಸುಮ್ಮನೆ ಬಿಬಿಎಂಪಿ ಕಸ ಗುತ್ತಿಗೆದಾರರನ್ನು ಗುರಿ ಮಾಡಲಾಗುತ್ತಿದೆ. ನಮ್ಮ ಲಾರಿ ಜಪ್ತಿ ಮಾಡಿದರೆ ಬಿಡಿಸಿಕೊಳ್ಳಲು ಪೊಲೀಸರೇ ಲಂಚ ಪಡೆಯುತ್ತಾರೆ. ಲಕ್ಷ ರೂಪಾಯಿ ಕೊಡದೇ ನಮ್ಮ ಲಾರಿಗಳನ್ನು ಬಿಡುವುದಿಲ್ಲ ಎಂದು ಬಿಬಿಎಂಪಿ ಕಸ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಬ್ರಮಣ್ಯ ತಿಳಿಸಿದರು.
ನಗರದಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿ, ಥಣಿಸಂಧ್ರದ ಘಟನೆಯಲ್ಲೂ ನಮ್ಮ ಚಾಲಕನ ತಪ್ಪಿರಲಿಲ್ಲ. ಆ ಡೆಲಿವರಿ ಬಾಯ್ ಮದ್ಯದ ಅಮಲಿನಲ್ಲಿ ಇರುವುದು ಪೊಲೀಸರಿಗೂ ಗೊತ್ತಾಗಿದೆ. ಆದರೆ, ಇನ್ಶೂರನ್ಸ್ ಸಿಗಲಿ ಎಂದೂ ಪೊಲೀಸರು ಆ ವಿಚಾರ ಕೈ ಬಿಡುವಂತೆ ಹೇಳಿದ್ದರು. ಮಾನವೀಯತೆ ದೃಷ್ಟಿಯಿಂದ ಹೋಗಲಿ ಬಿಡಿ ಎಂದಿದ್ದೆವು. ಆದರೆ, ಮರು ಕ್ಷಣವೇ ನಮ್ಮ ಚಾಲಕನಿಗೆ ಹೆವೀ ವೈಕಲ್ಸ್ ಬ್ಯಾಡ್ಜ್ ಇಲ್ಲ ಎಂದು ಹೇಳಲಾಯಿತು. ಅದನ್ನು ನಾವು ಸಾಬೀತು ಮಾಡುತ್ತೇವೆ ಎಂದರು.
ಅಧಿಕಾರಿಗಳಿಂದ ಕಿರುಕುಳ:ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಕೊಡುವ ಕಿರುಕಳಕ್ಕೆ ನಮ್ಮ ಸಿಬ್ಬಂದಿ ಕೆಲಸ ಬಿಟ್ಟು ಹೋಗುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದರು.