ಬೆಂಗಳೂರು: ದಿನದಿಂದ ದಿನಕ್ಕೆ ರಾಜ್ಯದಲ್ಲಿ ಒಮಿಕ್ರಾನ್ ಅಬ್ಬರ ಹೆಚ್ಚಾಗುತ್ತಿದೆ. ನಗರದಲ್ಲಿ ಹಬ್ಬಗಳು, ಆಚರಣೆಗಳ ಮೇಲೆ ಕಡಿವಾಣ ಹಾಕುವ ಬಗ್ಗೆಯೂ ಚಿಂತನೆ ನಡೆಯುತ್ತಿದೆ. ತಜ್ಞರ ಸಮಿತಿಯ ವರದಿ ಆಧರಿಸಿ, ಸರ್ಕಾರ ಕೈಗೊಳ್ಳುವ ತೀರ್ಮಾನವನ್ನು ಬೆಂಗಳೂರು ವ್ಯಾಪ್ತಿಯಲ್ಲೂ ಬಿಬಿಎಂಪಿ ಜಾರಿಗೆ ತರಲಿದೆ.
ಕ್ರಿಸ್ ಮಸ್ ಹಾಗೂ ಹೊಸ ವರ್ಷ ಆಚರಣೆಯಲ್ಲಿ ನಿರ್ಬಂಧದ ಬಗ್ಗೆ ಆಯಾ ಸಂದರ್ಭಕ್ಕೆ ತಕ್ಕಂತೆ ಕ್ರಮವಹಿಸಲಾಗುವುದು. ಇದಕ್ಕೆ ಮೊದಲು ದೊಡ್ಡ ಸಮಾರಂಭಗಳಲ್ಲಿ ಭಾಗವಹಿಸುವಾಗ ಜನರೇ ಎಚ್ಚರವಹಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಮನವಿ ಮಾಡಿದ್ದಾರೆ.
ಒಮಿಕ್ರಾನ್ ಹರಡುವಿಕೆ ಕುರಿತಂತೆ ಮಾತನಾಡಿದ ಅವರು, ವಿಶ್ವದಾದ್ಯಂತ ಒಮಿಕ್ರಾನ್ ರೂಪಾಂತರಿ ವೈರಸ್ ಹರಡುವಿಕೆ ಹೆಚ್ಚಳವಾಗುತ್ತಿದೆ. ಅದೇ ರೀತಿ ರಾಜ್ಯದಲ್ಲೂ ಹೊಸ ಪ್ರಕರಣಗಳೂ ಪತ್ತೆಯಾಗ್ತಿವೆ. ಯುಕೆಯಲ್ಲಿ ನಿತ್ಯ 70-80 ಸಾವಿರ ಪ್ರಕರಣ ಪತ್ತೆಯಾಗ್ತಿವೆ ಎಂದು ಲಂಡನ್ನಿಂದ ವರದಿ ಬಂದಿದೆ.