ಬೆಂಗಳೂರು :ಕಾರ್ತಿಕ ಮಾಸದ ಕಡೆಯ ಸೋಮವಾರ(ನವೆಂಬರ್ 29ರಂದು) ನಡೆಯುವ ಪಾರಂಪರಿಕ ಕಡಲೇಕಾಯಿ ಪರಿಷೆ ಜಾತ್ರೆಗೆ (Kadalekai parishe fest) ಈಗಾಗಲೇ ಅನುಮತಿ ನೀಡಲಾಗಿದೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ 700 ಪೊಲೀಸ್ ಮತ್ತು ಬಿಬಿಎಂಪಿ ಸಿಬ್ಬಂದಿಯನ್ನು ನೇಮಕ ಮಾಡಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ(BBMP Commissioner gourav gupta) ತಿಳಿಸಿದರು.
ನಗರದ ಬಿಬಿಎಂಪಿ ಕಚೇರಿಯಲ್ಲಿ ಕಡಲೆಕಾಯಿ ಪರಿಷೆ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಾಡಿನ ಸಂಸ್ಕೃತಿ ಬಿಂಬಿಸುವ ಕಡಲೇಕಾಯಿ ಪರಿಷೆಯನ್ನು ಸಂಪ್ರದಾಯ, ಸಂಸ್ಕ್ರತಿ ಮತ್ತು ಜಾನಪದ ವೈಭವದಿಂದ ಆಚರಿಸಲಾಗುವುದು. ಅಧಿಕ ಜನರು ಭೇಟಿ ನೀಡುವುದರಿಂದ ಮೂಲಸೌಕರ್ಯ, ಭದ್ರತೆಗೆ ಹೆಚ್ಚಿನ ಒತ್ತು ನೀಡಲು ಅಧಿಕಾರಿಗಳಿಗೆ ಸೂಚಿಸಿದರು.
2ನೇ ಡೋಸ್ ಕೊರೋನಾ ಲಸಿಕೆಗೆ ಸೂಚನೆ
ಬೆಂಗಳೂರಿನಲ್ಲಿ ಸದ್ಯಕ್ಕೆ ಕೋವಿಡ್ ಹತೋಟಿಯಲ್ಲಿದೆ. ಜ್ವರ, ನೆಗಡಿಯಂತಹ ಲಕ್ಷಣಗಳು ಇದ್ರೆ ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಿ. ಶೇ.57ರಷ್ಟು ಜನರು ಎರಡನೇ ಡೋಸ್ ಲಸಿಕೆ ಪಡೆದಿದ್ದಾರೆ. ಇನ್ನು, ಕೆಲವರು 12 ವಾರಗಳಾದರೂ 2ನೇ ಡೋಸ್ ಪಡೆದಿಲ್ಲ. ಅಂತಹವರಿಗೆ ಕರೆ ಮಾಡಿ ಜಾಗೃತಿಗೊಳಿಸುತ್ತಿದ್ದೇವೆ. ಜೊತೆಗೆ ಹತ್ತಿರದ ಕೇಂದ್ರಗಳಿಗೆ ಬಂದು ಲಸಿಕೆ ಪಡೆಯುವಂತೆ ಸೂಚಿಸಿದ್ದೇವೆ ಎಂದು ಗೌರವ್ ಗುಪ್ತಾ ತಿಳಿಸಿದರು.