ಬೆಂಗಳೂರು:ನಗರದಲ್ಲಿ ಮಳೆ ಸುರಿದು ರಸ್ತೆ ಹಾಳಾಗಿರುವ ಹಿನ್ನೆಲೆಯಲ್ಲಿ ಸಮರ್ಪಕ ನಿರ್ವಹಣೆಗೆ ಅತೀ ಮುಖ್ಯ ಹಾಗೂ ಮುಖ್ಯ ರಸ್ತೆಗಳ ಜವಾಬ್ದಾರಿಯನ್ನು ರಸ್ತೆ ಮತ್ತು ಮೂಲಭೂತ ಸೌಕರ್ಯ ವಿಭಾಗಕ್ಕೆ ಮರುಹಂಚಿಕೆ ಮಾಡಿ ಆಯುಕ್ತ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.
ಈ ಹಿಂದೆಯೂ ಮುಖ್ಯರಸ್ತೆಗಳ ನಿರ್ವಹಣೆಯನ್ನು ಎಂಟು ವಲಯದ ಮುಖ್ಯ ಇಂಜಿನಿಯರ್ಗಳಿಗೆ ಹಂಚಿಕೆ ಮಾಡಿ, ವಾರ್ಡ್ ಮಟ್ಟದ ಇಂಜಿನಿಯರ್ ವಿಭಾಗಕ್ಕೆ ನಿರ್ವಹಣೆ ಜವಾಬ್ದಾರಿ ನೀಡಲಾಗಿತ್ತು. ಆದರೆ, ಮುಖ್ಯರಸ್ತೆಗಳು ವಾರ್ಡ್ಗಳಲ್ಲಿ ಹಂಚಿಹೋಗುವುದರಿಂದ ಯಾರ ಜವಾಬ್ದಾರಿಗೆ ಬರುತ್ತದೆ ಎನ್ನುವ ಗೊಂದಲ ಸೃಷ್ಟಿಯಾಗುತ್ತಿತ್ತು.
ಬಿನ್ನಿಮಿಲ್ ರಸ್ತೆ ಸೇರಿದಂತೆ ವಿವಿಧ ರಸ್ತೆಗಳನ್ನು ಪರಿಶೀಲನೆ ನಡೆಸಲಾಗಿದ್ದು, ಇವುಗಳ ನಿರ್ವಹಣೆ ಸಮರ್ಪಕವಾಗಿ ನಡೆದಿಲ್ಲ. ಈಗಾಗಲೇ ವಾರ್ಡ್ ಮಟ್ಟದ ಇಂಜಿನಿಯರ್ಗಳಿಗೆ ವಾರ್ಡ್ಗಳ ರಸ್ತೆ ಜವಾಬ್ದಾರಿ ಇರುವುದರಿಂದ ಪ್ರಮುಖ ರಸ್ತೆ ನಿರ್ವಹಣೆ ಸವಾಲಾಗಲಿದೆ. ಹೀಗಾಗಿ ಪ್ರಮುಖ ರಸ್ತೆಗಳ ನಿರ್ವಹಣೆಗೆ ಇರುವ ರಸ್ತೆ ಮೂಲಭೂತ ಸೌಕರ್ಯ ವಿಭಾಗಕ್ಕೆ ಈ ರಸ್ತೆಗಳ ನಿರ್ವಹಣೆ ಹಾಗೂ ಮೇಲ್ವಿಚಾರಣೆ ವಹಿಸಲಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಪಾಲಿಕೆಯಿಂದ ಕೋಲ್ಡ್ ಮಿಕ್ಸ್ ಘಟಕ ಕೂಡಾ ನಿರ್ಮಾಣ ಮಾಡಲಾಗಿದೆ. ಇದು ಕೂಡ ರಸ್ತೆ ಮೂಲಭೂತ ಸೌಕರ್ಯ ವಿಭಾಗದ ಅಧೀನದ ಸಂಚಾರ ಇಂಜಿನಿಯರಿಂಗ್ ವ್ಯಾಪ್ತಿಯಲ್ಲಿದೆ. ಹೀಗಾಗಿ ಕೂಡಲೇ ವಲಯದ ಮುಖ್ಯ ಇಂಜಿನಿಯರ್ಗಳಿಂದ ಕಡತ ಪಡೆದುಕೊಂಡು, ಪ್ರಮುಖ ರಸ್ತೆಗಳ ನಿರ್ವಹಣೆಗೆ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.