ಬೆಂಗಳೂರು: ಹೈಕೋರ್ಟ್ ಚಾಟಿ ಬೀಸಿರುವ ಹಿನ್ನೆಲೆ ಬಿಬಿಎಂಪಿ ವ್ಯಾಪ್ತಿಯ ಸಾರ್ವಜನಿಕ ಜಾಗಗಳಲ್ಲಿರುವ ಅನಧಿಕೃತ ಕಟ್ಟಡಗಳನ್ನು ಗುರುತಿಸುವ ಬಗ್ಗೆ ಇಂದು ಸಭೆ ನಡೆಸಲಾಯಿತು.
ಆಯುಕ್ತ ಮಂಜುನಾಥ್ ಪ್ರಸಾದ್ ನೇತೃತ್ವದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ನಲ್ಲಿ ವಲಯಗಳ ಜಂಟಿ ಆಯುಕ್ತರುಗಳು, ಮುಖ್ಯ ಎಂಜಿನಿಯರ್ಗಳು, ಕಾರ್ಯಪಾಲಕ ಎಂಜಿನಿಯರ್ಗಳು, ಸಹಾಯಕ ಕಾರ್ಯಪಾಲಕ/ಸಹಾಯಕ ಎಂಜಿನಿಯರ್ಗಳು, ಕಂದಾಯ ಅಧಿಕಾರಿಗಳು ಹಾಗೂ ವಿಶೇಷ ಆಯುಕ್ತರಾದ ಜೆ.ಮಂಜುನಾಥ್, ಬಸವರಾಜ್, ರಾಜೇಂದ್ರ ಚೋಳನ್, ರವೀಂದ್ರ, ತುಳಸಿ ಮದ್ದಿನೇನಿ ಭಾಗಿಯಾಗಿದ್ದರು.
ಬಿಬಿಎಂಪಿ ವ್ಯಾಪ್ತಿಯ ರಸ್ತೆ, ಪಾದಚಾರಿ ಮಾರ್ಗ, ಉದ್ಯಾನ, ಆಟದ ಮೈದಾನ, ಸರ್ಕಾರಿ ಜಾಗ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಅತಿಕ್ರಮಿಸಿ ಅನಧಿಕೃತವಾಗಿ ನಿರ್ಮಿಸಿರುವ ಮಂದಿರ, ಮಸೀದಿ, ಚರ್ಚ್, ಗುರುದ್ವಾರ ಸೇರಿ ಧಾರ್ಮಿಕ ಕಟ್ಟಡಗಳನ್ನು 3 ದಿನಗಳಲ್ಲಿ ಸಮೀಕ್ಷೆ ಮಾಡಿ, ಸಮಗ್ರ ವರದಿ ನೀಡಬೇಕೆಂದು ಆಯುಕ್ತರು ಎಲ್ಲಾ ಆಧಿಕಾರಿಗಳಿಗೆ ಕೋರ್ಟ್ ಸೂಚಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸಿರುವ ಬಗ್ಗೆ 2009ರಲ್ಲಿ ಸುಪ್ರೀಂಕೋರ್ಟ್ನಲ್ಲಿ ಪಿಐಎಲ್ ದಾಖಲಿಸಲಾಗಿದ್ದು, ಇದು ಕೇವಲ ಬಿಬಿಎಂಪಿಗೆ ಮಾತ್ರವಲ್ಲದೆ ದೇಶಕ್ಕೆ ಅನ್ವಯವಾಗಲಿದೆ. ಈ ಪೈಕಿ 29 ಸೆಪ್ಟೆಂಬರ್ 2009ರಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಧಾರ್ಮಿಕ ಕಟ್ಟಡಗಳ ಬಗ್ಗೆ ಸಮೀಕ್ಷೆ ನಡೆಸಿ, ವರದಿ ನೀಡಬೇಕೆಂಬ ಆದೇಶವಾಗಿದೆ.
ಈ ಆದೇಶದಲ್ಲಿ 2009ರ ಮುನ್ನ ನಿರ್ಮಿಸಿರುವ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಬೇರೆಡೆಗೆ ಸ್ಥಳಾಂತರ, ತೆರವುಗೊಳಿಸುವ ಕಾರ್ಯ ಮಾಡಬೇಕು. 29 ಸೆಪ್ಟೆಂಬರ್ 2009ರ ನಂತರ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸುವಂತಿಲ್ಲ ಎಂಬ ಆದೇಶವಿದೆ ಎಂದು ಆಯುಕ್ತರು ತಿಳಿಸಿದರು. ಜನವರಿ 28ರಂದು ಹೈಕೋರ್ಟ್ ವಿಚಾರಣೆ ಇರುವ ಹಿನ್ನೆಲೆ ಪಾಲಿಕೆ ಕೋರ್ಟ್ಗೆ ಈ ಕುರಿತು ಮಾಹಿತಿ ನೀಡಬೇಕಿದೆ.
ಹೀಗಾಗಿ, 2009ರ ಮುನ್ನ ಹಾಗೂ 2009ರ ನಂತರ ನಿರ್ಮಾಣ ಮಾಡಿರುವ ಧಾರ್ಮಿಕ ಕಟ್ಟಡಗಳ ಬಗ್ಗೆ ಮಾಹಿತಿ ನೀಡಬೇಕು. ಹೈಕೋರ್ಟ್ಗೆ ವರದಿ ಸಲ್ಲಿಸಿದ ನಂತರ ಪೊಲೀಸ್ ಇಲಾಖೆಯ ಭ್ರದತೆಯೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸಲು ಕ್ರಮವಹಿಸಬೇಕು ಎಂದು ಆಯುಕ್ತರು ತಿಳಿಸಿದರು.